ಒಳಗಾಯ- ಅನಸೂಯಾ ಕಾಂಬ್ಳೆ ಅವರ ಕವನ

ನಾನೇ ಬರೆದ ಸಾಲುಗಳನ್ನು
ಅಳಿಸಬೇಕೆಂದುಕೊಂಡಾಗಲೂ
ಉಳಿದುಕೊಳ್ಳುವುದು ಕಪ್ಪುಕಲೆ

ಕಿಟಕಿ ಗ್ಲಾಸಿನಾಚೆ ಕುಳಿತ ಹಕ್ಕಿ
ತನ್ನ ತಾನು ಕುಕ್ಕಿಕೊಳ್ಳುವಂತೆ
ಭ್ರಮೆ-ವಾಸ್ತವಗಳ ಪ್ರತಿಫಲಿತ

ವಿಚಿತ್ರವೆಂದರೂ ಸತ್ಯ!
ಸುಳ್ಳಿಗೆ ಸಿಹಿ ಲೇಪಿಸಬಹುದು
ಕಣ್ಣೀರಿಗಲ್ಲ!

ಮುಳ್ಳು ಬೇಲಿಯ ಮೇಲೂ ನಗುವುದು ಹೂವು
ಬಳ್ಳಿ ಬುಡದಲಿ ಮಿಡಿನಾಗರಗಳು
ರಸಿಕನೋಟಕೆ ಹೂವಷ್ಟೇ ಸುಂದರ!

ಒಳಗಾಯ ರಸ್ತೆ ತಗ್ಗಿನಂತಲ್ಲ
ಸಾಗುವ ಸರಕಿಗೆ ಬೆನ್ನು ಸವಾರಿ
ಅವ್ವ ಅಸ್ಮಿತೆ ಬ್ರಾಂಡೆಡನ್ ರೂಪದರ್ಶಿ!

ಹುಡುಕಲಾಗದು ಈಗ
ಕಾಳಸಂತೆಯಲಿ ಕಳೆದುಹೋದವರ
ಕಣ್ಣರೆಪ್ಪೆಯಲ್ಲಿಟ್ಟರೂ ಮಾಯಾ ಜಗತ್ತಿನ ಪಾಲು

ಬಂದವಪ್ಪ ಬಂದವು
ಎಂಥ ದಿನಗಳು! ಜಗತ್ತನು
ಸೀರೆಯಲಿ ಸುತ್ತಿಟ್ಟ ಅಮರಗೀತಗಳು

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *