ಏನ ಹೇಳಲಿ – ಸವಿತಾ ರವಿಶಂಕರ್
ಏನ ಹೇಳಲಿ
ಹುಡುಗ
ನಡುರಾತ್ರಿಯ ಈ ಮಳೆಯ ನೋಡುತಿರುವಾಗ
ಕಣ್ಣಿಗೆ ಕಾಣದಿದ್ದರು
ಎದೆಯ ಮುಟ್ಟಿ ಬೆರಳಾಡುವ
ಹುಡುಗಾಟಿಕೆಗೆ ಬಳೆಯ ಶಬ್ದವಲ್ಲದೆ
ಕೊಡಲಿ ಏನು?
ಒಂದೊಂದು
ನಿಟ್ಡುಸಿರು ಹೇಳುವವೇನು?
ಕಳೆದ ಕಾಲದ
ಲೆಕ್ಕವನು.
ಕನಸಿಗಿಷ್ಟು
ಪಾಟಿಚೀಲಕ್ಕಷ್ಟು
ವ್ಯಾನಿಟಿಬ್ಯಾಗಿಷ್ಟು
ಕೊನೆಗು ತಳದಲೆಲ್ಲೋ
ಮಡಚಿ ಸುರುಳುಗಟ್ಟಿ
ಹರಿದ ಹಾಳೆಯಲಿ
ಉಳಿದದ್ದು ನಾ ಕಾಣೆ.
ಸೀಬೆಯ ಹಣ್ಣಿಗೆ
ಗಿಳಿ ಮೂಗುದ್ದಮಾಡಿ
ಚುಚ್ಚಿದಂತೆ,
ನಾ ಎಷ್ಟೆ ನಡೆದರು
ಉದ್ದುದ್ದ ನಿನ್ನ ನೆನಪು
ಕವಡೆ ಕಾಯಿ ಮಾಡಿ
ಉರುಳಿಸಿದರು
ಮತ್ತೆ ಘಟ್ಟದಲ್ಲಿ
ಪಟ್ಟವೇರಿ ನಸುನಕ್ಕವನು.
ಎದ್ದುಬಿದ್ದು
ಹೊಡೆತಗಳಷ್ಟೆ
ಉಂಡವಳು.
ಊರುರುಳಿ
ಕೊನೆಗೂ
ಹಣ್ಣಾದರು
ಹೊಟ್ಟೆತುಂಬ
ನಿನ್ನವೇ ಬೀಜ
ರಕ್ತಬೀಜಾಸುರ
ಹೊರಬಂದು
ಘಟ್ಟದ ಮೇಲೇರಿ
ಕಿಸಕ್ಕನೆಂದು
ಹಾದಿ ಹಾರಿ ಹೂ
ದುಂಬಿಗಳಾಗಿ
ಕಾಡ್ಯಾವು.
ಬಗಲಾಗಿನ ಹೂವಾಗಿ
ಉಳಿದವರು ಹೊರಳಿ
ಒಡಲಾಗಿನ ಮುಳ್ಳಾಗಿ
ಕಾಡಿದರೆ ಹಾಡಲೇನ
ಪಾಡಲೇನ?
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.
August 13th edition is very interesting. Each and every article is good. Sushila chintamani’s article is very thought provoking. Article on Ila bhat is inspiring