Latestಚಾವಡಿಭಾವಯಾನ

ಎಲ್ಲರ ಮನೆಯ ರಾಜಿ – ಮೇಘನಾ ಸುಧೀಂದ್ರ

ರಾಜಿ ಅವತ್ತು ಆಸ್ಪತ್ರೆಯ ಬೆಂಚಿನ ಮೇಲೆ ಒಬ್ಬಳೇ ಕೂತಿದ್ದಳು.  ಅವಳು ತುಂಬಾ ಪ್ರೀತಿಸುತ್ತಿದ್ದ ಅವಳ ಅಣ್ಣ (ಅಪ್ಪ) ಒಂದಷ್ಟು ಪೈಪ್ ಗಳು, ಮೆಷೀನ್ ಗಳ ಮಧ್ಯದಲ್ಲಿ ತಣ್ಣನೆ ಮಲಗಿದ್ದರು. ಆಸ್ಪತ್ರೆಯ ಡಾಕ್ಟರ್ ಅವತ್ತು “ಇನ್ನೆಷ್ಟು ದಿವಸವೋ ಗೊತ್ತಿಲ್ಲಮ್ಮ, ಇರೋದಷ್ಟು ದಿವಸ ಹೀಗೆ ಇರ್ತಾರೆ” ಎಂದು ಹೋಗಿದ್ದರು. ರಾಜಿ ಗಟ್ಟಿಗಿತ್ತಿ. ಆದರೂ ಅವತ್ತು ಅವಳಿಗೆ ಕಣ್ಣಲ್ಲಿ ದಳದಳ ನೀರಿಳಿಯುತ್ತಿತ್ತು. ತಾನು ತುಂಬಾ ಪ್ರೀತಿಸುತ್ತಿದ್ದ ಅಣ್ಣ, ಯಾವುದೇ ಕಾರಣಕ್ಕೂ ಏನೂ ಅನ್ನದ ಅಣ್ಣ, ಅವಳಷ್ಟೆ ಗಟ್ಟಿಯಾದ ಅಣ್ಣ ಇವತ್ತು ಮೆದುವಾಗಿ ಮಲಗಿದ್ದಾರೆ. ಮತ್ತೆಂದೂ ಏಳುವುದಿಲ್ಲ ಎಂಬ ಕಟು ಸತ್ಯ ಅವಳೀಗ ಅವಳ ಜಗತ್ತರಿಯದ ಅಮ್ಮನಿಗೆ ತಿಳಿಸಬೇಕಿದೆ. ತಿಳಿಸಿದರೂ ಅರ್ಥವಾಗುತ್ತಾ ಎಂದು ಮನಸಲ್ಲಿ ಅಂದುಕೊಂಡು ಕೂತಿದ್ದಾಳೆ.

ಸ್ಮೃತಿಪಟಲದಲ್ಲಿ ಅವಳ ಜೀವನ ಅವಳ ಹಿಂದೆ ಹಾದುಹೋಗುತ್ತಿತ್ತು. ರಾಜಿಗೆ ಹತ್ತಿರತ್ತಿರ 50 ವರ್ಷ. ಆದರೂ 30 ವರ್ಷ ಸಂಸಾರ ಮಾಡಿದ ಅನುಭವ. 19 ವಯಸ್ಸಿಗೆ ಅವಳ ಮದುವೆ, ಈಗಲೂ ಮಗಳ ಮದುವೆಯ ಭಾವಚಿತ್ರಕ್ಕಿಂತ ಅವಳ ಮದುವೆಯ ಭಾವಚಿತ್ರವೇ ಚೆಂದವಿದೆ. ನೋಡಿದೋರೆಲ್ಲ “ಮಗಳಿಗಿಂತ ಅಮ್ಮನೇ ಚೆಂದ, ಈಗ್ಲೂ ಒಂದು ಸ್ವಲ್ಪ ಸಣ್ಣ ಇದ್ದಿದ್ದ್ರೆ ಅವಳನ್ನ ಮೀರಿಸುತ್ತಾಳೆ” ಎಂಬ ಮಾತುಗಳು ಆಗಾಗ ಕೇಳಿ ಬರುತ್ತಿರುವುದು ಅವಳ ಕಿವಿಗೆ ಬಿದ್ದರೂ ಅದನ್ನ ಸೀರಿಯಸ್ ಆಗಿ ತೆಗೆದುಕೊಳ್ಳುತ್ತಿಲ್ಲ. ಕಾಲೇಜಿನ ಅತಿಲೋಕ ಸುಂದರಿ ಎಂದು ಕರೆಸಿಕೊಳ್ಳುತ್ತಿದ್ದಳು, ಅವಳಿಗೆ ಆ ಪಟ್ಟವನ್ನ ಬೇರೆ ಕಟ್ಟಿದ್ದರು ಎಂದು ಕಾಲೇಜಿನಲ್ಲಿ. ಆ ವಯಸ್ಸಿನಲ್ಲಿ ಅವಳನ್ನ ನೋಡಿದ ಜನರು ಅವಳು ದೊಡ್ಡ ಹಿರೋಯಿನ್ ಆಗಬಹುದೋ, ಅಥವಾ ಒಳ್ಳೆ ಮಾಡಲ್ ಆಗಬಹುದೋ ಎಂದು ಅಂದುಕೊಳ್ಳುತ್ತಿದ್ದರು. ಅದೆಷ್ಟು ಗಂಡುಮಕ್ಕಳ ನಿದ್ದೆಗೆಡಿಸಿದಳೋ ರಾಜಿ ಗೊತ್ತಿಲ್ಲ. ಅದೆಷ್ಟು ಜನ ಅವಳನ್ನ ಇಷ್ಟಪಡುತ್ತಿದ್ದರೋ ? ಅದು ಗೊತ್ತಿಲ್ಲ.

ರಾಜಿ ಖುದ್ದು ಅವಳ ಗಂಡನ ಜೊತೆಯ ಪ್ರೇಮಪ್ರಕರಣವನ್ನೇ ತನ್ನ ಮಕ್ಕಳಿಗೆ ತಿಳಿಸಿಲ್ಲ. ಅಷ್ಟು ಕಟ್ಟುನಿಟ್ಟು. ಆಗಾಗ ಅವಳ ಅಸ್ತಿತ್ವದ ಪ್ರಶ್ನೆ ಎದುರಾಗಿದ್ದರೂ ಎಂದಿಗೂ ಎದೆಗುಂದದೆ ಅವಳ ನಿಯಮದಂತೆ ನಡೆದವಳು. ಇಡೀ ಮನೆಯಲ್ಲಿ ಅವಳನ್ನು ರೆಬೆಲ್ ಎಂದು ಕರೆಯುತ್ತಿದ್ದದ್ದು ಅವಳ ಈ ಎರಡು ವಿಷಯಗಳನ್ನ ಗಮನಿಸಿಯೇ. ಒಂದು ಅವಳ ಗಂಡನನ್ನ ಏಕವಚನದಲ್ಲಿ ಕರೆದಿದ್ದಕ್ಕೆ, ಮತ್ತೊಂದು ಅವಳ ಹೆಸರನ್ನು ಮದುವೆಯ ನಂತರ ಬದಲಾಯಿಸದಿದ್ದಕ್ಕೆ. ಕಡೆ ಪಕ್ಷ ಇನಿಷಿಯಲ್ ಸಹ ಬದಲಾಯಿಸದ್ದಿದ್ದಕ್ಕೆ. ರಾಜಿಯ ಮಗಳ ಶಾಲೆಯಲ್ಲಿ ತಾಯಿಯ ಹೆಸರು ಸರೀಗಿಲ್ಲ ಎಂದು ಇದೇ ಕಾರಣಕ್ಕೆ ವಾಪಸ್ಸು ಕಳಿಸಿದ್ದರು. ಆಮೇಲೆ ರಾಜಿ ಬಂದು “ನನ್ನ ಗಂಡನ ಹೆಸರನ್ನು ಪಕ್ಕದಲ್ಲಿ ಸೇರಿಸಿಕೊಂಡಿಲ್ಲ” ಎಂದು ಸಮಜಾಯಿಷಿ ನೀಡಬೇಕಿತ್ತು. ರಾಜಿ ಹಾಗೇ ಇದ್ದದ್ದು.

19ನೇ ವಯಸ್ಸಿಗೆ ಮದುವೆಯಾಗಿತ್ತು ಅಂದೆನಲ್ಲ, ಬಂದ ಮನೆ ಕೂಡು ಕುಟುಂಬ. ತವರು ಮನೆಯೂ ಹಾಗೆಯೇ, ಅಪ್ಪನೇ ನಿಂತು ತನ್ನೆಲ್ಲಾ ತಂಗಿಯರಿಗೆ ಮದುವೆ ಮಾಡಬೇಕಿತ್ತು. ತೀರ ಅವಳು ಮತ್ತು ಅವಳ ಸೋದರತ್ತೆ ಒಂದೇ ವಾರಗೆಯವರಾಗಿದ್ದರು. ಈ ಎಲ್ಲಾ ಮಜಲುಗಳನ್ನ ದಾಟಿ ಬಂದಿದ್ದಳವಳು.  ತುಂಬಿದ ಮನೆಗೆ ಬಂದ ರಾಜಿಗೆ, ಅದೆಷ್ಟು ರಾಜಿಗಳಾಯ್ತೋ.  ಹಂಗಾಗಿ ಮಕ್ಕಳನ್ನ, ಗಂಡನನ್ನ ಬಹಳ ಇಂಡಿಪೆಂಡೆಂಟಾಗಿ ತಯಾರು ಮಾಡಿದ್ದಳು.

ರಾಜಿ ಯಾವುದೇ ಕಾಲೇಜಿನ ಕಾಮರ್ಸ್ ವಿದ್ಯಾರ್ಥಿನಿ ಅಲ್ಲ, ಅಥವಾ ಸಿ ಎ ಸಹ ಅಲ್ಲ, ಆದರೂ ಬ್ಯಾಂಕಿನ ಅಷ್ಟೂ ವ್ಯವಹಾರ ತಿಳಿದಿತ್ತು. ಪೈಸೆ ಪೈಸೆ  ಕೂಡಿಡುವ ಚಾಣಾಕ್ಷತನ. ಅದರಲ್ಲಿ ಮಗಳ ಮದುವೆಯನ್ನ, ಅವಳ ಸ್ನಾತಕೋತ್ತರ ಪದವಿಯ ಖರ್ಚುವೆಚ್ಚವನ್ನ, ಮನೆ ಸಾಲವನ್ನ ತನ್ನ ಸುಖವನ್ನೆಲ್ಲಾ ಬದಿಗೊತ್ತಿ ಮಾಡುತ್ತಾ ಬಂದಿದ್ದಳು. ರಾಜಿ ಒಳ್ಳೆ ಕಲಾವಿದೆ ಆಗಿದ್ದರೂ ಮನೆಯ ಅಷ್ಟೂ ಕೆಲಸಗಳನ್ನ ನಿಭಾಯಿಸಬೇಕಿದ್ದರಿಂದ ಅದೆಲ್ಲದಕ್ಕೂ ಸಮಯ ಹೊಂದಿಸಿಕೊಳ್ಳಲು ಆಗುತ್ತಿರಲ್ಲಿಲ್ಲ. ಅವಳ ದೇಹಕ್ಕೆ ಬೇಕಾದ ವ್ಯಾಯಾಮಕ್ಕೂ ಸಮಯವಿರುತ್ತಿರಲ್ಲಿಲ್ಲ. ಹೆಣ್ಣು ತ್ಯಾಗಮಯಿ ಎಂಬ ವಾಕ್ಯವನ್ನ ನಂಬುತ್ತಿರಲ್ಲಿಲ್ಲವಾದರೂ ಅದನ್ನ ಅಕ್ಷರಶಃ ಪಾಲಿಸುತ್ತಿದ್ದಳು. ಅವಳಿಗೆ ಅದು ಅಭ್ಯಾಸವಾಗಿ ಹೋಗಿರುತ್ತಿತ್ತು.  ತನ್ನ ಹೆಣ್ಣು ಮಕ್ಕಳು ಹಾಗೆ ಆಗಬಾರದೆಂದು ಬಯಸುತ್ತಿದ್ದಳು.

ಗಂಡನ ಮನೆಗೆ ಬಂದ ಮೇಲೆ ಮಕ್ಕಳನ್ನ ಶಾಲೆಗೆ ಬಿಡೋದಕ್ಕೆ ಅನುಕೂಲವಾಗಲೆಂದು ಗಾಡಿ ಕಲಿತಳು ರಾಜಿ. ಅವಳ ಗಂಡ ತನ್ನಿಬ್ಬರು ಮಕ್ಕಳನ್ನು ಗಾಡಿಯಲ್ಲಿ ಕೂರಿಸಿಕೊಂಡು, ರಾಜಿಯನ್ನೂ ಸಹ ಕೂರಿಸಿಕೊಂಡು ದೊಡ್ಡ ರಸ್ತೆಗೆ ಬರುತ್ತಿದ್ದ. ನಂತರ ಮಕ್ಕಳಿಬ್ಬರನ್ನ ರಸ್ತೆಯಲ್ಲಿ ನಿಲ್ಲಿಸಿಕೊಂಡು ಅವಳಿಗೆ ಭಾರವಾದ ಕೈನೆಟಿಕ್ ಹೋಂಡಾವನ್ನ ಕಲಿಸತೊಡಗಿದ. ಮೊದಮೊದಲು ಆ ಹೆಣಭಾರದ ಗಾಡಿಯನ್ನ ಕಂಟ್ರೋಲ್ ಮಾಡುವಲ್ಲಿ ಕಷ್ಟಪಡುತ್ತಿದ್ದ ರಾಜಿಗೆ ಆಮೇಲೆ ಅದು ಅವಳ ಆತ್ಮಸಂಗಾತಿಯಾಗುತ್ತಾ ಬಂದಿತು. ಮನೆಗೆ ಬಂದ ಕಾರನ್ನು ಓಡಿಸಲೂ ಅವಳೇ ಬೇಗ ಕಲಿತುಕೊಂಡಳು. ಕಡೆಗೆ ಅವಳ ಮಾವ ಅತ್ತೆಯಿಂದ ಶಹಬ್ಬಾಸ್ ಗಿರಿ ತೆಗೆದುಕೊಂಡಿದ್ದಳು. ಒಟ್ಟಿನಲ್ಲಿ ರಾಜಿ 9 ರಿಂದ 5 ರ ವರೆಗೆ ಆಚೆ ಕೆಲಸ ಮಾಡುವುದಕ್ಕಿಂತ ಮನೆಯಲ್ಲಿಯೇ 24 ಘಂಟೆಯೂ ಕೆಲಸ ಮಾಡುತ್ತಾ ಇದ್ದಳು.

ರಾಜಿ ಎಂದಾಕ್ಷಣ ಎರಡು ವಿಷಯಗಳು ನೆನಪಾಗುತ್ತಾ ಹೋಗುತ್ತದೆ. ಒಂದು ಅವಳೆರಡೂ ಹೆಣ್ಣು ಮಕ್ಕಳೂ ಮೈನೆರೆದಾಗ ಮನೆಯಲ್ಲಿ ಯಾವ ಸಮಾರಂಭವನ್ನೂ ಮಾಡಲ್ಲಿಲ್ಲ. ಹೆಣ್ಣು ಮೈನೆರೆಯೋದು ಬಹು ಸಹಜ ಪ್ರಕ್ರಿಯೆ, ಅದಕ್ಕೆಲ್ಲ ಹೊರಗೆ ಕೂಡಿಸೋದು, ಅದಕ್ಕೊಂದು ಸಮಾರಂಭ ಮಾಡೋದು ಇದ್ಯಾವುದೂ ರಾಜಿ ನಂಬಿಕೊಂಡುಬಂದಿರಲ್ಲಿಲ್ಲ. ಅತೀ ಸಂಪ್ರದಾಯದ ಕುಟುಂಬದಲ್ಲಿ ಅವಳು ಹಾರಿಸಿದ ಮೊದಲ ಅತಿ ದೊಡ್ಡ ರೆಬಿಲಿಯಸ್ ಧ್ವಜ. ತನ್ನಿಬ್ಬರು ಮಕ್ಕಳಿಗೂ ಮುಟ್ಟಾದಾಗ ಹೇಗೆ ನಾರ್ಮಲ್ ಆಗಿರಬೇಕೆಂದು ಹೇಳಿಕೊಟ್ಟಿದ್ದಳು. ಹಾಗೆಯೇ ಒಂದು ಸ್ವಲ್ಪ ವರ್ಷಗಳ ನಂತರ ಗಂಡನಿಗೆ ಮಧ್ಯರಾತ್ರಿ ಎದೆಯಲ್ಲೇನೋ ಕಸಿವಿಸಿಯಾಯ್ತು ಎಂದು ಅವಳೇ ಕಾರ್ ಡ್ರೈವ್ ಮಾಡಿಕೊಂಡು ಆಸ್ಪತ್ರೆಗೆ ಕರೆದುಕೊಂಡು ಹೋಗಿ ನಂತರ ಬಂದು ಎಲ್ಲರಿಗೂ ವಿಷಯ ತಿಳಿಸಿದ್ದಳು. ಅಷ್ಟು ದಿಟ್ಟೆ ರಾಜಿ. ಆ ಧೈರ್ಯವೆಲ್ಲಾ ಅಪ್ಪ ಕಲಿಸಿಕೊಟ್ಟಿದ್ದು ಎಂದು ಹೇಳುತ್ತಲೇ ಇದ್ದಳು ರಾಜಿ.

ಹೆಣ್ಣು ದುಡ್ಡು ಸಂಪಾದನೆ ಮಾಡಿದರೆ ಮಾತ್ರ ಅವಳಿಗೆ ಗೌರವ, ಸಿಕ್ಕಾಪಟ್ಟೆ ಮರ್ಯಾದೆ, ಹಾಗೂ ಫೆಮಿನಿಸಂ, ಇಕ್ವಾಲಿಟಿ ಅದೂ ಇದೂ ಎಲ್ಲದರ ಮಧ್ಯೆ ರಾಜಿಯ ಹಾಗೆ ಮನೆಯಲ್ಲಿಯೇ ಸಂಬಳವಿಲ್ಲದೆ ದುಡಿದು ಮನೆಯನ್ನ,  ಮನೆಯವರನ್ನ ಒಂದು ಹಂತಕ್ಕೆ ತರುವ ಹೆಣ್ಣುಮಕ್ಕಳನ್ನ ಯಾವ ಗುಂಪಿಗೆ ಸೇರಿಸೋದು ಗೊತ್ತಾಗುತ್ತಿಲ್ಲ. ರಾಜಿ ಆಚೆ ಕಡೆ ಕೆಲಸಕ್ಕೆ ಮಾತ್ರ ಹೋಗುವುದಿಲ್ಲ ಆದರೆ ಮಿಕ್ಕಿದೆಲ್ಲವನ್ನೂ  ಮಾಡುವವಳು.

ತನಗೇನನಿಸಿದರೂ ಧೈರ್ಯದಿಂದ ಹೇಳುತ್ತಿದ್ದ ರಾಜಿಗೆ ಅವತ್ತು ಮಾತ್ರ ಅಂದೆಲ್ಲೋ ಓದಿದ “ಹೆಣ್ಣು ನೋವನ್ನ ಮುಕ್ಕಬೇಕು” ಎಂಬ ವಾಕ್ಯ ನೆನೆಪಾಯಿತು. ಅವಳಪ್ಪ ಮತ್ತೆ ಎದ್ದೇಳದ ಸ್ಥಿತಿಯಲ್ಲಿ ಮನೆಗೆ ಬಂದಿದ್ದರು. ಅವತ್ತು ಅವಳು ನೋವನ್ನ ಮುಕ್ಕಿದ್ದಳು. ಯಾವ ಅಬ್ಬರವೂ ಮಾಡದೆ, ಮೂಲೆಯಲ್ಲಿ ನಿಂತು ಬಂದವರಿಗೆ ಕೂರುವ, ಮತ್ತೇನೋ ಕೊಡುವ ವ್ಯವಸ್ಥೆ ಮಾಡುತ್ತಿದ್ದಳು. ಮುಂದಿನ ಕೆಲಸಗಳಿಗೂ ಅನುವುಮಾಡಿಕೊಡುತ್ತಿದ್ದಳು. ರಾಜಿ ಮೌನವಾಗಿ ಕಣ್ಣೀರು ಹಾಕಿದ್ದಳು. ಅಪ್ಪನಿಗೆ ವಿದಾಯ ಹೇಳಿದಳು.

ರಾಜಿಯಂತಹ ಹೆಣ್ಣುಮಕ್ಕಳು ನಮ್ಮ ಮನೆಗಳಲ್ಲಿ ಇದ್ದೇ ಇರುತ್ತಾರೆ, ಅವರೆಲ್ಲರಿಗೆ ನನ್ನ ದೊಡ್ಡ ಸಲಾಮ್. ರಾಜಿಯ ಹಾಗೆ ಅತೀವ ನೋವಲ್ಲೂ ಮುಕ್ಕುವ ಕಲೆ ನನಗೆ ಬರಲಿ. ಹಾಗೆಯೇ ರಾಜಿಯ ಧೈರ್ಯವೂ ಸಹ. ಅದಕ್ಕೆ ಅವಳ ಅಪ್ಪ ಅವಳನ್ನ ತಾಯಿಯ ಹಾಗೆ “ರಾಜಮ್ಮ” ಅನ್ನುತ್ತಿದ್ದದ್ದು.. ನಿಮ್ಮ ಮನೆಯ ರಾಜಿ ಹೇಗಿದ್ದಾಳೆ ?

ಮೇಘನಾ ಸುಧೀಂದ್ರ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *