ಆಕೆಯ ಚರ್ಮವೂ ಮಾರಾಟದ ವಸ್ತು – ನೂತನ ದೋಶೆಟ್ಟಿ

ವೇಶ್ಯಾವಾಟಿಕೆಗಾಗಿ, ಬಾಡಿಗೆಗೆ ಮಕ್ಕಳನ್ನು ಹೆರಲು ಹಾಗೂ ಅಂಗಾಂಗಗಳ ಕಸಿಗಾಗಿ ಆರೋಗ್ಯವಂತ  ನೇಪಾಳಿ ಮಹಿಳೆಯರನ್ನು ಭಾರತಕ್ಕೆ ಕರೆತರುವ ಬೃಹತ್‌ ಜಾಲವೇ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಆದರೆ,  ಸುಂದರವಾದ ಬಿಳಿ ತ್ವಚೆಗಾಗಿ ನೇಪಾಳಿ ಹೆಣ್ಣು ಮಕ್ಕಳನ್ನು ಭಾರತಕ್ಕೆ ವಾಮ ಮಾರ್ಗದಲ್ಲಿ ಕರೆತರುವ, ತ್ವಚೆಗಾಗಿ ಅವರನ್ನು ಕೊಲ್ಲುವ ಹೇಯ ಕೃತ್ಯಗಳು ಇತ್ತೀಚೆಗೆ ಬೆಳಕಿಗೆ ಬಂದಿವೆ.

ಪ್ರಪಂಚದಾದ್ಯಂತ ಇಂದು ಬಡತನದಿಂದ ನಲುಗುತ್ತಿರುವ ರಾಷ್ಟ್ರಗಳಲ್ಲಿ ಹೆಣ್ಣು ಕೊಳ್ಳುವ/ಮಾರುವ ಸರಕಾಗಿದ್ದಾಳೆ ಎಂಬುದಕ್ಕೆ ಅನೇಕ ಪುರಾವೆಗಳಿವೆ. ಐಸಿಸ್ ಉಗ್ರರು ನಡೆಸುತ್ತಿರುವ ಮಹಿಳೆಯರ ಬಿಕರಿ ಇತ್ತೀಚಿನ ಉದಾಹರಣೆಯಾದರೆ ಕೆಲವು ವರ್ಷಗಳ ಹಿಂದೆ ತಾಲಿಬಾನಿಗಳು ಗುಡುಗುತ್ತಿದ್ದ ರಾಷ್ಟ್ರಗಳಲ್ಲೂ ಇದೇ ಪರಿಸ್ಥಿತಿಯಿತ್ತು. ನಮ್ಮ ನೆರೆಯ ರಾಷ್ಟ್ರಗಳಾದ ನೇಪಾಳ, ಬಾಂಗ್ಲಾದೇಶ ಕೂಡ ಇದರಿಂದ ಹೊರತಾಗಿಲ್ಲ. ಹೆಣ್ಣನ್ನುಪ್ರಮುಖವಾಗಿ ದೇಹ ವ್ಯಾಪಾರದಲ್ಲಿ ತೊಡಗಿಸುವ ಉದ್ದೇಶದಿಂದ ಆಕೆಯನ್ನು ದೇಶಾಂತರಗಳ ಗಡಿದಾಟಿಸಿ ನುಸುಳಿಸುವ ಜಾಲಗಳು ಈಗ ಸಾಕಷ್ಟು ಇವೆ. ಭಾರತದ ಪ್ರಮುಖ ನಗರಗಳೂ ಇದಕ್ಕೆ ವೇದಿಕೆಯಾಗಿವೆ. ಏಷ್ಯಾದಿಂದ ಪ್ರಪಂಚದ ಇತರ ಭಾಗಗಳಿಗೆ ಮಾನವ ಸಾಗಣೆಯಲ್ಲಿ ಬೆಂಗಳೂರು ಮೂಲನೆಲೆ ಎಂಬ ವಿಷಯ ಬೆಚ್ಚಿಬೀಳಿಸುವಂಥದ್ದು.
ನೇಪಾಳ ಕಡು ಬಡತನದಿಂದ ನಲುಗುತ್ತಿರುವ ದೇಶ. ಪ್ರವಾಸೋದ್ಯಮ ಅಲ್ಲಿಯ ಮುಖ್ಯ ಹಣಗಳಿಕೆಯೂ ಹೌದು. ಉಳಿದ ದೇಶಗಳಂತೆ ಭಾರತದಿಂದ ಅಲ್ಲಿಗೆ ಹೋಗಬೇಕಾದರೆ ವೀಸಾ, ಪಾಸ್ಪೋರ್ಟಗಳ ಅವಶ್ಯಕತೆಯೂ ಇಲ್ಲ. ಆದ್ದರಿಂದ ಅಲ್ಲಿಂದ ಮಾನವ ಕಳ್ಳಸಾಗಾಣಿಕೆಯೂ ಸುಲಭ. ಅಲ್ಲಿಂದ ಉದ್ಯೋಗವನ್ನರಸಿ ಬರುವ ಅನೇಕಾನೇಕ ಬಡ ಪುರುಷರು ಭಾರತದ ನಗರಗಳಲ್ಲಿ ವಾಚ್‍ಮನ್‍ಗಳಾಗಿ, ದಲ್ಲಾಳಿಗಳಾಗಿ ಕೆಲಸಕ್ಕೆ ಸೇರಿಕೊಂಡರೆ ಮಹಿಳೆಯರನ್ನು ದೇಹ ಮಾರಾಟ ದಂಧೆಗೆ ಕರೆತರಲಾಗುತ್ತದೆ. ಹಾಗೆ ಬರುವ ಹೆಣ್ಣುಗಳಲ್ಲಿ ಎಲ್ಲರಿಗೂ ತಮ್ಮನ್ನು ಇಂತಹ ಪಾಪಕೂಪಕ್ಕೆ ನೂಕಲಾಗುತ್ತದೆ ಎಂಬ ಅರಿವೇ ಇರುವುದಿಲ್ಲ. ಅಂತಹ ಅನೇಕ ಹೆಣ್ಣುಗಳನ್ನು ಸ್ವತಃ ಗಂಡನೇ ದುಡ್ಡಿಗೆ ಮಾರುತ್ತಾನೆ. ಇಲ್ಲವೇ  ಅತ್ತೆ-ಮಾವಂದಿರು ಹಣಕ್ಕಾಗಿ ಮಾರುತ್ತಾರೆ. ಕೊಂಡವರು ಆ ಮಹಿಳೆಯರು, ಮಕ್ಕಳನ್ನು ರಾಸುಗಳನ್ನು ತುಂಬಿಕೊಂಡಂತೆ ಲಾರಿಯಲ್ಲಿ ತುಂಬಿಕೊಂಡುಮುಂಬೈಗೆ ಬರುತ್ತಾರೆ.

ಹೀಗೆ ಮುಂಬೈಗೆ ಬಂದವರಲ್ಲಿ ಲೊಕಿಶಾ ಕೂಡ ಒಬ್ಬಳು. ನೇಪಾಳದಿಂದ ಮುಂಬೈಗೆ ನೂರಾರು ಮೈಲಿ ದಾಟಿ ಅವಳು ತಾನಾಗಿ ಬಂದಿರಲಿಲ್ಲ. ಅವಳನ್ನು ಖರೀದಿಸಿ ತರಲಾಗಿತ್ತು. ಅವಳ ವಿರೋಧದ ನಡುವೆಯೂ ಸ್ವತಃ ಆಕೆಯ ಗಂಡನೇ 2012ರಲ್ಲಿ ಅವಳನ್ನು ದಲ್ಲಾಳಿಗಳಿಗೆ ಮಾರಾಟ ಮಾಡಿದ್ದ. ಅನೇಕ ಅತ್ಯಾಚಾರಗಳನ್ನು ಸಹಿಸಿಕೊಂಡು ಕೆಲ ವರ್ಷ ದೇಹ ವ್ಯಾಪಾರದಲ್ಲಿ ತೊಡಗಿದ ಅವಳು ಒಂದು ದಿನ ಅವರ ಹಿಡಿತದಿಂದ ತಪ್ಪಿಸಿಕೊಂಡು ಮುಂಬೈಗೆ ಬಂದು ಅದೃಷ್ಟವಶಾತ್ ಒಳ್ಳೆಯ ಮನೆಯಲ್ಲಿ ಕೆಲಸಕ್ಕೆ ಸೇರಿಕೊಂಡಳು. ತನ್ನ ದೇಶದಲ್ಲಿ ತಾನು ಬಿಟ್ಟು ಬಂದ ಒಂದು ಸುಂದರ ಹೆಣ್ಣುಮಗು ಕೇಸರಿ ಹಾಗೂ ಒಂದು ಗಂಡು ಮಗು ಗೋಪುವನ್ನು ಪ್ರತಿಕ್ಷಣ ನೆನೆಯುತ್ತ ಇಲ್ಲಿ ಬದುಕುತ್ತಾಳೆ. ಈ ನಡುವೆ ಅವಳ ಮಗಳು ನೇಪಾಳಿ ಸುರಸುಂದರಿಯಾಗಿ ಬೆಳೆಯುತ್ತಾಳೆ. ಆಗ ಅವಳ ತಂದೆ ತನ್ನ ಎರಡೂ ಮಕ್ಕಳನ್ನು ಮತ್ತೆ ಮಾರುತ್ತಾನೆ. ಅವರನ್ನು ಖರೀದಿಸಿದವರು ಆ ಮಕ್ಕಳಿಗೆ ತಮ್ಮ ತಾಯಿಯನ್ನು ತೋರಿಸಲು ಕರೆದುಕೊಂಡು ಹೋಗುವುದಾಗಿ ಹೇಳಿ ನಂಬಿಸಿ ಕರೆದುಕೊಂಡು ಬರುತ್ತಾರೆ. ಕೇಸರಿ ಹಾಗೂ ಆಕೆಯ ತಮ್ಮ ಗೋಪು ನೇಪಾಳದಿಂದ ಮುಂಬೈನಲ್ಲಿರುವ ತಮ್ಮತಾಯಿ ಲೊಕಿಶಾಳನ್ನು ನಾಲ್ಕು ವರ್ಷಗಳ ನಂತರ ಅಂದರೆ 2016 ರಲ್ಲಿ ಭೇಟಿಯಾಗಲು ಹೊರಡುತ್ತಾರೆ. ತಮ್ಮ ತಾಯಿ ಬಂದಂತೆ ತಾವೂ ಭಾರತದ ನೆಲವನ್ನು ತಲುಪುತ್ತಾರೆ.

ಆ ಸುಂದರ ಮಗಳನ್ನು ಖರೀದಿಸಿ ತಂದ ದಲ್ಲಾಳಿ ಒಬ್ಬ ನೇಪಾಳಿಯೇ. ಅವನೇ ಅವಳ ತಾಯಿಯನ್ನೂ ತಂದವನು. ಹಾಗಾಗಿ, ಆ ಮಗಳು ಅವನನ್ನು ನಂಬುತ್ತಾಳೆ. ಖರೀದಿದಾರರ ತಂಡ ಸುಂದರಿಯಾಗಿರುವ ಆ ಹುಡುಗಿಯನ್ನು ಕಾಳಜಿಯಿಂದ ನೋಡಿಕೊಳ್ಳುತ್ತದೆ. ಅವಳಿಗೆ ಮಾತ್ರ ತಿನ್ನಲು ಒಳ್ಳೆಯ ಆಹಾರವನ್ನು ನೀಡಲಾಗುತ್ತದೆ. ಅದೇ ಆಹಾರವನ್ನು ತನ್ನ ತಮ್ಮನಿಗೂ ಕೊಡಬೇಕೆಂದು ಆಕೆ ಹಠ ಮಾಡುತ್ತಾಳೆ. ಅದಕ್ಕೆ ಅವರು ಸುತಾರಾಂ ಒಪ್ಪುವುದಿಲ್ಲ. ಕೊನೆಗೆ ಅವಳ ಹಠಕ್ಕೆ ಮಣಿದು ಅವಳ ಊಟವನ್ನು ಅವನೊಡನೆ ಹಂಚಿಕೊಳ್ಳಲು ಒಪ್ಪಿಗೆ ನೀಡುತ್ತಾರೆ. ಇದರ ಹಿಂದೆ ದೊಡ್ಡ ಸಂಚೇ ಇದೆ.  ’ನಿನ್ನ  ಆರೋಗ್ಯ ನಮಗೆ ಬಹಳ ಮುಖ್ಯ. ನಿನ್ನ ಬೆಳ್ಳಗಿನ ನುಣುಪು ತ್ವಚೆ ನಮ್ಮ ಪಾಲಿಗೆ ದೊಡ್ಡ ಖಜಾನೆಯನ್ನೇ ತೆರೆಯಬಲ್ಲದು’ ಎಂದು ಅವರು ಹೇಳುತ್ತಾರೆ. ತಾಯಿಯನ್ನು ನೋಡುವ ಸಂತಸದಲ್ಲಿ ಈ ಯಾವ ಮಾತುಗಳೂ ಅವಳಿಗೆ ಅರ್ಥ ಆಗುವುದಿಲ್ಲ.

ಆಕೆಯ ತಾಯಿಯನ್ನು ತೋರಿಸುತ್ತೇವೆ ಎಂಬುದು ಆಕೆಗೆ ನೀಡಿದ ಹುಸಿ ಭರವಸೆಯಷ್ಟೇ. ನಿಜವಾಗಿ ಅವಳನ್ನು ಕರೆತರುತ್ತಿರುವದು ಅವಳ ಚರ್ಮವನ್ನು ತೆಗೆದು ಮಾರಾಟ ಮಾಡಿ ಹಣ ಗಳಿಸಲು! ಇದು ಅಂಗಾಂಗ ಮಾರಾಟದ ಜಾಲ. ಆ ಹುಡುಗಿಯ ಚರ್ಮದ ಆರೋಗ್ಯ ಹಾಗೂ ಗುಣಮಟ್ಟದ ಬಗ್ಗೆ ಮೊದಲು ನುರಿತ ವೈದ್ಯರು ಪರೀಕ್ಷೆ ಮಾಡುತ್ತಾರೆ. ಅದರ ಸ್ಯಾಂಪಲ್ಲುಗಳನ್ನು ಚರ್ಮದ ಅಗತ್ಯವಿದ್ದವರಿಗೆ ಕಳಿಸಲಾಗುತ್ತದೆ. ಅವರ ಒಪ್ಪಿಗೆ ಬರುವಷ್ಟರಲ್ಲಿ ಚರ್ಮ ತೆಗೆದ ಭಾಗದಲ್ಲಿ ಹೊಸಚರ್ಮ ಬೆಳೆದಿರುತ್ತದೆ. ಒಪ್ಪಿಗೆ ಬಂದ ನಂತರ ಆಕೆಯ ಚರ್ಮ ಬಿಕರಿಯಾಗುತ್ತದೆ. ಅಂದರೆ ಆಕೆಯನ್ನು ಹತ್ಯೆ ಮಾಡಲಾಗುತ್ತದೆ! ನಾವು ಕಿಡ್ನಿ ಕಳ್ಳರನ್ನು ಓದಿ ತಿಳಿದಿದ್ದೇವೆ. ಆದರೆ ಬದುಕಿರುವ ವ್ಯಕ್ತಿಯ ಚರ್ಮದ ಕಳ್ಳರೂ ಇದ್ದಾರೆ ಎಂದರೆ ಅದೆಂತಹ ಅಮಾನವೀಯತೆ.

ಇದು ಯಾವುದೋ ಕಟ್ಟುಕಥೆಯಲ್ಲ. ನಮ್ಮ ದೇಶ ದರಾಜಧಾನಿ ದೆಹಲಿಯಲ್ಲಿ 2016 ರಲ್ಲಿ ಬೆಳಕಿಗೆ ಬಂದ ಸತ್ಯ ಘಟನೆ. ದೆಹಲಿಯ ತಿಲಕ ನಗರ ಪೋಲೀಸರಿಗೆ 20-22 ವರ್ಷದ ನೇಪಾಳಿ ಹುಡುಗಿಯ ಶವ ದೊರೆಯುತ್ತದೆ. ಅವಳ ಶವ ಪರೀಕ್ಷೆ ಮಾಡಿದ ವೈದ್ಯರು ಆಕೆಯ ಕೊಲೆಯ ಬರ್ಬರತೆಯನ್ನು ತೆರೆದಿಡುತ್ತಾರೆ. ಆ ಹುಡುಗಿಯ ದೇಹದ ಮೇಲೆ ಅಲ್ಲಲ್ಲಿ ಪಟ್ಟಿಕಟ್ಟಲಾಗಿರುತ್ತದೆ. ಆ ಪಟ್ಟಿತೆಗೆದಾಗ ಆ ಭಾಗದ ಚರ್ಮ ನಾಪತ್ತೆಯಾಗಿರುವುದು ಕಂಡು ಬರುತ್ತದೆ. ಪೋಲೀಸರಿಗೆ ಮೊದಲು ಇದು ದೇಹ ವ್ಯಾಪಾರದ ಪ್ರಕರಣವಾಗಿ ಕಂಡು ಬರುತ್ತದೆ. ಆ ನಂತರ ಒಂದು ತಿಂಗಳ ಅಂತರದಲ್ಲಿ ಮತ್ತೊಂದು ನೇಪಾಳಿ ಹುಡುಗಿಯ ದೇಹ ಅದೇ ಅವಸ್ಥೆಯಲ್ಲಿ ಪತ್ತೆಯಾಗುತ್ತದೆ.

ಇದೇ ಸಮಯದಲ್ಲಿ ಮುಂಬೈನ ತನ್ನ ಕೆಲಸದ ಮನೆಯಿಂದ ಓಡಿ ಹೋಗುವ ಲೊಕಿಶಾ ದಾರಿಹೋಕ ನೊಬ್ಬನ ತಲೆಗೆ ಹೊಡೆದು ಅವನ ಮೊಬೈಲ್ ಕದ್ದು ಓಡುತ್ತಾಳೆ. ಮೊಬೈಲ್ ಕಳೆದುಕೊಂಡ ವ್ಯಕ್ತಿ ಮುಂಬೈ ಪೋಲಿಸರಲ್ಲಿ ಪ್ರಕರಣ ದಾಖಲು ಮಾಡಿದಾಗ  ಪೋಲಿಸರು ತನಿಖೆ ಆರಂಭಿಸುತ್ತಾರೆ. ಅದೇ ಸಮಯದಲ್ಲಿ ಲೊಕಿಶಾ ದೆಹಲಿಗೆ ಹೋಗುವ ಟ್ರಕ್ಕಿನಲ್ಲಿ ಮುಂಬೈನಿಂದ ಹೊರಡುತ್ತಾಳೆ. ಟ್ರಕ್ಕಿನ ಚಾಲಕ ಅವಳನ್ನು ದೇಹ ಸಂಬಂಧದ ಆಸೆಯಿಂದ ಹತ್ತಿಸಿಕೊಳ್ಳುತ್ತಾನೆ. ದಾರಿಯಲ್ಲಿ ಅವಳನ್ನು ಮತ್ತೆ ಮತ್ತೆ ದೇಹ ಸಂಪರ್ಕಕ್ಕೆ ಒತ್ತಾಯಿಸುವುದರಿಂದ ಆಕೆ ಅವನನ್ನು ಕೊಂದು ತಪ್ಪಿಸಿಕೊಳ್ಳುತ್ತಾಳೆ. ಟ್ರಕ್ಕಿನ ಕ್ಲೀನರ್ ಈ ಪ್ರಕರಣ ದಾಖಲು ಮಾಡುತ್ತಾನೆ. ಅದನ್ನು ಬೆನ್ನು ಹತ್ತಿದ ಮುಂಬೈ ಪೋಲೀಸರು ದೆಹಲಿ ತಲುಪುತ್ತಾರೆ. ಮಕ್ಕಳು ಭಾರತಕ್ಕೆ ಬರುತ್ತಿದ್ದಾರೆ ಎಂಬುದನ್ನು ಪತ್ತೆ ಹಚ್ಚಿಕೊಂಡ ತಾಯಿ ಲೊಕಿಶಾ ತನ್ನ ಮಕ್ಕಳನ್ನು ಈ ಜಾಲದ ಕೈಯಿಂದ ತಪ್ಪಿಸಲು ಮುಂಬೈನಿಂದ ದೆಹಲಿಗೆ ತಲುಪುವಷ್ಟರಲ್ಲಿ ಪಡಬಾರದ ಪಾಡು ಪಡುತ್ತಾಳೆ. ಈ ನಡುವೆ ಆಕೆಯ ಮಗಳ ಚರ್ಮದ ಪರೀಕ್ಷೆ ನಡೆಯುತ್ತದೆ. ಆದರೆ ಆಕೆಯ ಹತ್ಯೆಯ ಮೊದಲೇ ಮುಂಬೈ ಹಾಗೂ ದೆಹಲಿ ಪೋಲಿಸರ ಕಾರ್ಯಕ್ಷಮತೆಯಿಂದಾಗಿ ಆ ಹುಡುಗಿ ರಕ್ಷಿಸಲ್ಪಡುತ್ತಾಳೆ.

ಮಾನವ ಕಳ್ಳ ಸಾಗಣೆಯ ಅತ್ಯಂತ ಭೀಕರ ಹಾಗೂ ಹೇಯ ಮುಖವನ್ನು ತೋರಿಸುವ ಈ ಪ್ರಕರಣ ಬೆಳಕಿಗೆ ಬರುವ ಕೆಲವು ಅಪರಾಧಗಳಲ್ಲಿ ಒಂದು ಮಾತ್ರ. ಬೆಳಕಿಗೆ ಬಾರದ ಪ್ರಕರಣಗಳಲ್ಲಿ ನಿರ್ದಯಿ ಹಣ ಪಿಪಾಸುಗಳಿಗೆ ಬಲಿಯಾಗುವ ಅನಾಮಿಕ ಹೆಣ್ಣುಗಳು, ಮಕ್ಕಳು ಅದೆಷ್ಟೋ. ಇಂತಹ ಜಾಲಗಳಲ್ಲಿ ಕ್ರೂರ ಅಪರಾಧಿಗಳು ಮಾತ್ರ ಇರುವುದಿಲ್ಲ ಹಾಗೂ ಪುರುಷರು ಮಾತ್ರ ಇರುವುದಿಲ್ಲ ಎಂಬುದನ್ನು ನಾವು ವಿಶೇಷವಾಗಿ ಗಮನಿಸಬೇಕು. ಈ ಜಾಲದಲ್ಲಿ ವಿದ್ಯಾವಂತ, ನುರಿತ ವೈದ್ಯರಿರುತ್ತಾರೆ. ಮಹಿಳೆಯರೂ ಇರುತ್ತಾರೆ. ಬಹುಶಃ ಮಹಿಳೆಯರ ಪಾತ್ರ ಬಹಳ ಮಹತ್ವದ್ದಾಗಿರುತ್ತದೆ. ಏಕೆಂದರೆ ಮಕ್ಕಳನ್ನು, ಮಹಿಳೆಯರನ್ನು ಸಾಗಿಸುವುದು ಪುರುಷರಿಗಿಂತ ಮಹಿಳೆಯರಿಗೆ ಸುಲಭವಾಗಬಲ್ಲದು.

ಈ ಮೇಲೆ ಹೇಳಿದ ಘಟನೆಯಲ್ಲೂ ಪುರುಷರೊಂದಿಗೆ ಒಬ್ಬ ಮಹಿಳೆಯೇ ಮುಂಚೂಣಿಯಲ್ಲಿದ್ದಳು. ಅವಳು ದೆಹಲಿಯ ಕರೋಲ್‍ಬಾಗ್‍ನಲ್ಲಿ ತನ್ನ ಪಾರ್ಲರ್ ನಡೆಸುತ್ತಿದ್ದಳು. ಸುಂದರ ತ್ವಚೆಗಾಗಿ ಆಸೆ ಪಡುವ ಹಣವಂತ ಹೆಣ್ಣು-ಗಂಡುಗಳಿಗೆ ಬಡವರ ಆರೋಗ್ಯವಂತ ತ್ವಚೆಯ ಕೃಷಿ ಮಾಡಿ ಹಣ ಸಂಪಾದಿಸುತ್ತಿದ್ದಳು. ಇದು ಅವಳ ತಂಡ ಮಾಡಿದ ಮೊದಲ ಪ್ರಕರಣವೇನಾಗಿರಲಿಲ್ಲ. ಅದಾಗಲೇ ಅನೇಕ ನೇಪಾಳಿ ಸುಂದರ ಯುವತಿಯರು ಆಕೆಯ ಹಣದ ದಾಹಕ್ಕೆ ಬಲಿಯಾಗಿದ್ದರು. ಅವರ ದೇಹಗಳೇ ಆಗಾಗ ದೆಹಲಿ ಪೋಲಿಸರಿಗೆ ಸಿಕ್ಕಿದ್ದವು.

ಈ 21ನೇ ಶತಮಾನದಲ್ಲಿ  ಆಧುನಿಕ ತಂತ್ರಜ್ಞಾನ ಕೂಡ ಹೆಣ್ಣಿನ ದೌರ್ಜನ್ಯಕ್ಕೆ ಬಳಕೆಯಾಗುತ್ತಿದೆ ಎಂಬುದಕ್ಕೆ ಇದೊಂದು ನಿದರ್ಶನ. ಹಣಕ್ಕಾಗಿ ಹೆಣವನ್ನು ಬೀಳಿಸುವುದರಲ್ಲಿ ಹೆಣ್ಣುಗಳ ಪಾತ್ರವೂ ಇರುವುದು ಬೆಚ್ಚಿ ಬೀಳಿಸುವ ಸಂಗತಿಯಾಗಿದೆ. ಇಂತಹ ಸುದ್ದಿಗಳನ್ನು ಓದಿ, ಕೇಳಿದ ಮಾತ್ರಕ್ಕೇ ನಾವು ಭಯಭೀತರಾದರೆ, ಈ ಕೃತ್ಯಗಳಿಗೆ ಒಳಗಾಗಿ ಅಪಾರ ನೋವು, ಸಂಕಟ, ಅವಮಾನ, ದೌರ್ಜನ್ಯ, ಅತ್ಯಾಚಾರವನ್ನು ಎದುರಿಸುವ ಆ ಮುಗ್ಧ ಹೆಣ್ಣುಗಳ ಬದುಕ ಬವಣೆ ಊಹಿಸಲೂ ಅಸಾಧ್ಯ. ನಮ್ಮ ದೇಶವೂ ಸೇರಿಕೊಂಡಂತೆ ಪ್ರಪಂಚದಾದ್ಯಂತ ಹೆಣ್ಣು ಇನ್ನೂ ಪಶುವಿಗಿಂತ ಕಡೆಯಾಗಿ ಪರಿಗಣಿ ಸಲ್ಪಡುತ್ತಿರುವುದು, ಸಂತೆಯ ಸರಕಿನಂತೆ ಬಿಕರಿಯಾಗುವುದು, ಬಡತನದಲ್ಲಿ ಹುಟ್ಟಿದ ಒಂದೇ ಕಾರಣಕ್ಕೆ ಆಕೆಯ ಮೇಲೆ ಯಾರೂ ಸವಾರಿ ಮಾಡಬಹುದಾದ ಅಧಿಕಾರ ಪಡೆಯುವುದು ನಾವು ನಾಗರಿಕತೆಯಿಂದ ಅನಾಗರಿಕತೆಯತ್ತ ನಡೆಯುತ್ತಿರುವುದನ್ನು ಮತ್ತೊಮ್ಮೆ ಸಾಬೀತು ಮಾಡುತ್ತಿಲ್ಲವೇ?

ನೂತನ ದೋಶೆಟ್ಟಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *