Latestಚಾವಡಿಭಾವಯಾನ

ಅಸಹಾಯಕ ತಾಯಿ – ನೂತನ ದೋಶೆಟ್ಟಿ

ಅವು ಪ್ರಾಥಮಿಕ ಶಾಲಾ ದಿನಗಳು. ಅದೊಂದು ಸಂಜೆ ನಾವು ಶಾಲೆ ಬಿಟ್ಟು ಇನ್ನೇನು ಹೊರಡಬೇಕಾದ ಸಮಯ. ಆಗ ಆಟದ ಮೈದಾನದ ಮೂಲೆಯಲ್ಲಿ ಏನೋ ಚೀರಾಟ ಕೇಳಿತು. ಅಲ್ಲಿ ಕಳೆದ ಹಲವಾರು ದಿನಗಳಿಂದ ಹಾಕಿಕೊಂಡಿದ್ದ ಡೇರೆಯ ಒಳಗಿನಿಂದ ಚಿಕ್ಕ ಹುಡುಗನೊಬ್ಬ ಓಡಿ ಹೊರ ಬಂದ. ಅವನ ಹಿಂದೆಯೇ ಅವನ ತಾಯಿಯೂ ಓಡಿ ಬಂದಳು. ಅವಳ ಕೈಗೆ ಸಿಗದಂತೆ ಆ ಹುಡುಗ ಓಡುತ್ತ, ಜೋರಾದ ದನಿಯಲ್ಲಿ ಅಳುತ್ತ ನಡುನಡುವೆ ‘ನನಗೆ ಬೇಡ, ನನಗೆ ಬೇಡ’ ಎಂದು ಕೂಗುತ್ತಿದ್ದ. ಆ ತಾಯಿಯೂ ಅವನನ್ನು ಹಿಡಿಯುವ ಛಲ ಹೊತ್ತವಳಂತೆ ಅವನ ಹಿಂದೆಯೇ ಓಡುತ್ತಿದ್ದಳು. ಸುಮಾರು ಹತ್ತಿಪ್ಪತ್ತು ನಿಮಿಷಗಳ ಕಾಲ ಈ ಜೂಟಾಟ ನಡೆಯಿತು. ಅಂತೂ ಅವಳು ಅವನನ್ನು ಹಿಡಿದು ಒಳಗೆ ಎಳೆದುಕೊಂಡು ಹೋದಳು. ಕೆಲ ಹೊತ್ತಿನಲ್ಲಿ ಎಲ್ಲ ಶಾಂತವಾಯಿತು. ನೋಡುತ್ತ ನಿಂತಿದ್ದ ನಮಗೆ ಮೊದಮೊದಲು ಅದು ತಮಾಷೆಯಾಗಿ ಕಂಡರೂ ನಂತರ ಅಲ್ಲಿ ನಡೆದುದೇನು ಎಂಬುದನ್ನು ತಿಳಿಯುವ ಕುತೂಹಲ ಮಾತ್ರವಲ್ಲ, ಶಾಲೆಯ ಮಾನಿಟರ್ ಆಗಿದ್ದ ನನಗೆ ಅಲ್ಲಿ ಏನಾದರೂ ನಡೆಯಬಾರದ ಘಟನೆ ನಡೆದು ಅದರಿಂದ ನಮ್ಮ ಶಾಲೆಗೆ, ಶಾಲೆಯ ಮಕ್ಕಳಿಗೆ ತೊಂದರೆ ಆಗಬಾರದು ಎಂಬ ಜವಾಬ್ದಾರಿಯ ಅರಿವೂ ಇತ್ತು. ಆದ್ದರಿಂದ ಆ ಡೇರೆಗೆ ಹತ್ತಿರವಿದ್ದ ಇನ್ನೊಂದು ಡೇರೆಗೆ ನಾವು ಕೆಲ ವಿದ್ಯಾರ್ಥಿನಿಯರು ಹೋಗಿ ವಿಚಾರಿಸಿದೆವು. ಅಲ್ಲಿ ತಿಳಿದು ಬಂದ ಘೋರ  ಸತ್ಯ ಇಂದಿಗೂ ನನ್ನನ್ನು ಹಿಂಡುತ್ತಿದೆ.

ಆ ಹುಡುಗ  ಹಸಿವಿನಿಂದ ತಾಯಿಗೆ ತಿನ್ನಲು ಏನಾದರೂ ಕೊಡು ಎಂದು ಕೇಳಿದ್ದಾನೆ. ಅವನ ಹಸಿವನ್ನು ಹಿಂಗಿಸಲು ಸಾಧ್ಯವಾಗದ ಆಕೆ ಅವನಿಗೆ ಸೇಂದಿ ಕುಡಿಯುವಂತೆ ಒತ್ತಾಯಿಸಿದ್ದಾಳೆ. ಅವಳು ಅವನ ಹಿಂದೆ ಓಡಿದ್ದು ಅದೇ ಬಾಟಲಿಯನ್ನು ಹಿಡಿದುಕೊಂಡು. ಕುಡಿದ ಮತ್ತಿನಲ್ಲಿ ಪುಟ್ಟ ಹುಡುಗನ ಹಸಿವನ್ನು ಅಡಗಿಸುವ ಆ ತಾಯಿಯ ಹತಾಶೆ, ಅಸಹಾಯಕತೆಗೆ ನಮ್ಮ ಕಣ್ಣುಗಳು ಒದ್ದೆಯಾದವು. ಕುಡಿತವೆಂದರೇನು? ಸೆರೆ ಎಂದರೇನು? ಅದರ ದುಷ್ಟರಿಣಾಮಗಳೇನು? ಎಂಬ ಯಾವ ಮಾಹಿತಿಯೂ ಇರದಷ್ಟು ಪುಟ್ಟ ಹುಡುಗ ತನಗೆ ಅದು ಬೇಡ ಎಂದು ಗೋಗರೆಯುತ್ತಿದ್ದದ್ದು ಬಹುಶಃ ಅದನ್ನು ಕುಡಿದ ಮೇಲೆ ತನ್ನ ತಂದೆಯೋ, ತಾಯಿಯೋ ಪ್ರಪಂಚದ ಪರಿವೆಯಿಲ್ಲದೆ ಮನೆಯಲ್ಲೋ, ಬೀದಿಯಲ್ಲೋ ಬಿದ್ದಕೊಂಡು, ತನ್ನ ಪಾಲಿನ ಪ್ರೀತಿ, ವಾತ್ಸಲ್ಯವನ್ನೂ ನುಂಗಿ ಹಾಕುತ್ತಿದ್ದುದರ ಭಯದಿಂದ ಇರಬಹುದೇ ಎಂದು ಅನ್ನಿಸಿದ ಆ ಕ್ಷಣ ನನ್ನ ಮನಸ್ಸು ನೋವಿನಿಂದ ನರಳಾಡಿಸಿ  ಬಿಟ್ಟಿತು. ಮಾರನೇ  ದಿನ ಉಳಿದ ಶಿಕ್ಷಕರೊಂದಿಗೆ ಆ ಡೇರೆಗೆ ಹೋಗಿ ಅವಳಿಗೆ ತಿಳಿಹೇಳಬೇಕು ಎಂದು ನಿರ್ಧರಿಸಿಕೊಂಡು ನಮ್ಮ ಶಾಲೆಯ  ಗೆಳೆತಿಯರೊಂದಿಗೆ ನಾನು  ಹೊರಟಾಗ ಆಗಲೇ ಕತ್ತಲೆಯಾಗಿತ್ತು. ಇಷ್ಟು ಕತ್ತಲಾದ ಮೇಲೆ ಶಾಲೆಯಿಂದ ಹೊರಟಿದ್ದು ಇದೇ ಮೊದಲ ದಿನವಾದ್ದರಿಂದ ಮನೆಯಲ್ಲಿ ಅಮ್ಮನಿಗೆ ಭಯವಾಗಿತ್ತು. ಅಂದು ನನ್ನೆದುರು ಇಬ್ಬರು ತಾಯಂದಿರಿದ್ದರು. ಇಬ್ಬರೂ ಮಕ್ಕಳಿಗಾಗಿ ಬದುಕುವವರೇ.

ಬೆಳಿಗ್ಗೆ ಆ ತಾಯಿ ಡೇರೆಯಲ್ಲಿ ಸಿಗಲೇ ಇಲ್ಲ. ನಮ್ಮ ಶಿಕ್ಷಕರೂ ಕೂಡ ಅವಳಿಗೆ ತಿಳಿಹೇಳಿ ಪ್ರಯೋಜನವಿಲ್ಲ ಎಂದು ನನ್ನನ್ನು ಸಾಗಹಾಕಿದರು. ನಾನೊಬ್ಬಳೇ ಏನು ಮಾಡಬಹುದು ಎಂದು ತೋಚದೆ ನಾನೂ ಅರೆಮನಸ್ಸಿನಿಂದ ಸುಮ್ಮನಾದೆ. ಆದರೆ ಮುಂದಿನ ಒಂದು ವಾರದಲ್ಲಿ ಆ ಡೇರೆ ನಮ್ಮ ಆಟದ ಮೈದಾನದಿಂದ ಕಾಣೆಯಾಗಿತ್ತು. ಶಾಲೆಯ ಸಮಿತಿ ದೂರು ನೀಡಿ ಆ ಡೇರೆಯನ್ನು ಅಲ್ಲಿಂದ ಎಬ್ಬಿಸಿತ್ತು. ನೂರಾರು ಮಕ್ಕಳು ಓದುವ ಶಾಲೆಯ ಅಂಗಳದಲ್ಲಿ ದಿನವೂ ಆ ದೃಶ್ಯ ಕಾಣುತ್ತಿದ್ದರೆ ಮಕ್ಕಳ ಎಳೆಯ ಮನಸ್ಸುಗಳು ನಲುಗಬಹುದು ಅಥವಾ ಹಾದಿ ತಪ್ಪಲೂಬಹುದು ಎಂಬ ದೂರದೃಷ್ಟಿಯಿಂದ ಶಾಲಾ ಸಮಿತಿ ತೆಗೆದುಕೊಂಡ ನಿರ್ಧಾರವೇನೋ ಸರಿಯೆ. ಆದರೆ ಕುಡಿತಕ್ಕೆ ಒಲ್ಲದ, ಅದರಿಂದ ದೂರ ಓಡುತ್ತಿದ್ದ ಆ ಪುಟ್ಟ ಹುಡುಗನಿಗೂ ಬಾಲ್ಯವನ್ನು ಅನುಭವಿಸುವ ಹಕ್ಕು ಇತ್ತಲ್ಲವೆ? ಅದನ್ನು ಅವನಿಗೆ ನೀಡಬೇಕಾದ ಅವನ ಪಾಲಕರೇ ಅವನನ್ನು ತಪ್ಪು ಹಾದಿಗೆಳೆಯುತ್ತಿದ್ದರೆ ಶಾಲೆಯಾದರೂ ಆ ಜವಾಬ್ದಾರಿಯನ್ನು ಹೊರಬಹುದಿತ್ತು ಎಂದು ನನಗೆ ಅಂದು ಅನ್ನಿಸಿತ್ತು. ಶಾಲೆ ಅಲ್ಲಿಗೆ ಬರುವ ವಿದ್ಯಾರ್ಥಿಗಳಿಗಷ್ಟೇ ಶಿಕ್ಷಣ ನೀಡುವ ಹೊಣೆ ಹೊತ್ತಿದೆಯೇ? ತನ್ನ ಅಂಗಳದಲ್ಲೇ ಮಗುವೊಂದರ ಜೀವನ ಹಾಳಾಗುತ್ತಿದ್ದರೆ ಅದನ್ನು ಸರಿಪಡಿಸುವುದು ಶಾಲೆಯ ಹೊಣೆ ಆಗಬಾರದೆ ಎಂಬ ನನ್ನ ಪ್ರಶ್ನೆಗೆ ಉತ್ತರ ಸಿಗಲಿಲ್ಲ. ಮುಂದಿನ ಒಂದೆರಡು ವರ್ಷಗಳಲ್ಲಿ ಶಾಲೆಯ ಸುತ್ತ ಅಂತಹ ಯಾವ ಡೇರೆಯೂ ಕಾಣಲಿಲ್ಲ.

ನೂತನ ದೋಶೆಟ್ಟಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

One thought on “ಅಸಹಾಯಕ ತಾಯಿ – ನೂತನ ದೋಶೆಟ್ಟಿ


  • Warning: printf(): Too few arguments in /home/hitaishi/public_html/wp-content/themes/colormag/inc/template-tags.php on line 513

    Very well written! Plight of child and mother brought out with intense feelings!

    Reply

Leave a Reply to Nuggehalli Pankaja Cancel reply

Your email address will not be published. Required fields are marked *