ಕವನ ಪವನ/ ಎರಡು ಕವಿತೆಗಳು- ವಸುಂಧರಾ ಕದಲೂರು
- ಸಿಗಲಾರದ ಅಳತೆ
ನಿನ್ನ ಕಣ್ಣು ಕೈ ಮನಸ್ಸು
ನಾಲಗೆಗಳಲ್ಲಿ ಅಂದಾಜು ಪಟ್ಟಿ
ಹಿಡಿದು ಅಳೆದೆ ಅಳೆದೆ ಅಳೆದೆ
ಅಳೆಯುತ್ತಲೇ ಇದ್ದೀಯೆ..
ಸರಿ, ಅಳೆದುಕೋ
ಹಾಗೆ ಅಳತೆಗೆ ದಕ್ಕುವವಳಾದರೆ
ನೀ ಅಳೆಯುವುದಾದರೂ ಏನನ್ನು!
ಅಂದಾಜು ಸಿಗುವ ಒಂದಷ್ಟು
ಗಾತ್ರ- ಗೋತ್ರ; ಉಬ್ಬುತಗ್ಗು
ಅವಯವ- ಅವ್ವವ್ವಾ…
ಅಷ್ಟೇ
ಅಷ್ಟಕ್ಕೇ ನಿನಗೆ
ದಕ್ಕಿಬಿಟ್ಟರೆ, ರೇ…
ಹೋಗು, ಅಳೆದುಕೋ
ನಿನ್ನ ಅಳತೆಗೋಲು ಅಂದಾಜು
ಶತಮಾನ ಹಳತು ಅದರ ಗೋಲು;
ಮಾಡಿಕೊಂಡು ಬಂದದ್ದು ಬರೀ
ರೋಲುಕಾಲು. ಅದು
ಅಳೆದೂ ಸುರಿದೂ; ಸುರಿದೂ
ಅಳೆದೂ ಎಂದೋ ಬರಿದಾದ
ಗುಜರಿ ಮಾಲು.
ಅಳೆದು ಕೋ ನೀನು ಅಳೆದು
ಕೋ.. ಖೋ.. ಖೋ..
ಹೋಗು ನೀ ಅತ್ತ, ನೀ
ಅತ್ತತ್ತ. ನಿನಗೆ ಅಳತೆ ಒಂದು ನಿಮಿತ್ತ.
ಅಳತೆಯಿಂದ ಗಿಟ್ಟಿಸಿಕೊಳಲಾಗದ್ದು
ಎಂದೆಂದಿಗೂ ನಿಶ್ಚಿತ;
ಅಳತೆಗೆ ನಿಲುಕದ್ದು ಅವಳ ಚಿತ್ತ.
******
2. ಅರೆ ಹುಡುಗಿ..! ಎಲ್ಲಿ ಮರೆಯಾದೆ!?
ಎಲ್ಲೆಂದರಲ್ಲಿ ನಕ್ಕು ಎದೆ ಹಗೂರ
ಮಾಡಿಕೊಳ್ಳುತ್ತಿದ್ದ ಬಾಲೆ; ಈಗೀಗ
ತುಟಿ ಅಂಚಲೂ ಕಾಣದ ನಗು
ತುಳುಕಿಸುವುದ ಎಲ್ಲಿಂದ ಕಲಿತೆ
ಏಕೆ ಹುಡುಗಿ ನೀನೇಕೆ ಹೀಗಾದೆ..
ಮಾತು, ಮಾತು, ಮಾತಿನರಮನೆಯ
ಅಂಗಡಿ ತೆರೆದು ಕೂರುತ್ತಿದ್ದವಳೇ
ಮೌನವನ್ನು ಕಡ ಕೊಳ್ಳಲು ನಿನ್ನತ್ತ
ಬರಬೇಕಿದೆ ನೋಡೀಗ
ಏಕೆ ಹುಡುಗಿ ನೀನೇಕೆ ಹೀಗಾದೆ..
ನಿನ್ನ ಕಾಲ್ಗೆಜ್ಜೆಯ ಹೆಜ್ಜೆ ಲೋಕಕೆ
ಸಾರುತ್ತಿತ್ತು ನೀನೇ ಬರುತ್ತಿರುವುದೆಂದು
ಈಗೊಮ್ಮೆ ಬೆಳ್ಳಿ ಅಂಗಡಿಯಲ್ಲಿ ಸದ್ದು
ಮಾಡದ ಗೆಜ್ಜೆಗಳ ನೀ ಹುಡುಕುವುದ ಕಂಡೆ
ಏಕೆ ಹುಡುಗಿ ನೀನೇಕೆ ಹೀಗಾದೆ..
ಚಿಟ್ಟೆ ಜಡೆಯ ಹೂ ನಗುವಿನ
ಪುಟ್ಟ ಫ್ರಾಕಿನ ಚೆಲುವೆಯೇ
ತಟ್ಟನೆ ಮೌನ ಸಂಪದವು
ನೀನು ಅದು ಹೇಗಾದೆಯೇ
ಹೇಳೇ ಹುಡುಗಿ ನೀನು ಹೀಗೆ ಏಕಾದೆಯೇ…?!
–ವಸುಂಧರಾ ಕದಲೂರು
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.