ಕವನ ಪವನ/ ಅಮ್ಮನ ಋಣ – ಅನು: ಡಾ. ಬಿ.ಆರ್. ಮಂಜುನಾಥ್


ಗರ್ಭದಲ್ಲಿ ಕತ್ತಲಲ್ಲಿ ನನ್ನ ಜೀವ ಮೂಡಿದಾಗ
ನನ್ನ ತಾಯ ಪ್ರಾಣವು ಮನುಷ್ಯನಾಗಿ ಮಾಡಿತು
ಮನುಷ್ಯ ಜೀವ ಹುಟ್ಟಿಬರುವ ಒಂಭತ್ತು ತಿಂಗಳಲ್ಲಿ
ಅವಳ ಚೆಲುವು ನನ್ನ ಬೆಳೆಸಿ ತೇಯ್ದು ತೇಯ್ದು ಹೋಯಿತು
ಚಲನೆಯಲ್ಲಿ ಉಸಿರಿನಲ್ಲಿ ಅನ್ನ ರಸವ ಹೀರುವಲ್ಲಿ
ಸ್ವಲ್ಪ ಸ್ವಲ್ಪ ಅವಳ ಕೊಂದು ನಾನು ಉಳಿದು ಬೆಳೆದೆನು |

ಗೋರಿಯೊಳಗೆ ಕತ್ತಲಲ್ಲಿ ಹುದುಗಿ ಹೋದಳವಳು ಇಂದು
ತಾನೇ ಜೀವ ಕೊಟ್ಟವನನು ನೋಡಲಾರಳು
ಅವಳ ಒಲುಮೆ ಉಂಡ ನಾನು ಹೇಗೆ ಅದನು ಬಳಸುವೆ
ಒಳಿತಿಗೋ ಕೆಡಕಿಗೋ ಹೇಳಲಾರಳು
ಮನದ ದ್ವಾರ ತಟ್ಟಿ ತೆರೆದು ಅವಳ ಕಂದ ಆದುದೇನೋ
ಧೂಳು ಹಿಡಿದು ಹೋಯಿತೇನೋ ನೋಡಲಾರಳು |

ಗೋರಿ ದ್ವಾರ ತೆರೆದುಕೊಂಡು ಅವಳು ಹೊರಗೆ ಬಂದರೆ
ರಸ್ತೆಯಲ್ಲಿ ನನ್ನ ಪಕ್ಕ ಮೆಲ್ಲ ಹಾದು ಹೋದರೆ
ಅವಳ ತ್ಯಾಗ ಶ್ರಮವ ನೆನೆದು ನನ್ನ ಮುಖದಿ ಬೆಳಕು ಹೊಳೆದು
ಧನ್ಯ ಭಾವ ಕಾಣದಿರೆ ಗುರುತು ಹಿಡಿಯಳು
ಬೆಳೆದು ನಿಂತ ಪುಟ್ಟ ಮಗನ ನೋಡಿ ನೋಡದೆ
ರಸ್ತೆಯಲ್ಲಿ ನನ್ನ ಪಕ್ಕ ನಡೆದು ಬಿಡುವಳು |

ಅವಳಿಗಾಗಿ ನನ್ನ ಋಣವ ಸ್ತ್ರೀ ಕುಲಕೆ ನನ್ನ ಋಣವ
ತೀರಿಸಲು ಇಲ್ಲಿವರೆಗೆ ಏನು ಮಾಡಿದೆ
ನನಗಾಗಿ ಪಟ್ಟ ಶಾಪ ಅನುಭವಿಸಿದ ಅಧಿಕ ಶಾಪ
ಇದಕೊ ಬದಲು ಏನು ತಾನೇ ಕೊಡಲು ಬಲ್ಲೆನು
ಅವಳ ರಕ್ತ ಹೀರುತಲೆ ನಾನು ಬೆಳೆದು ಬಂದೆನು
ನನ್ನ ಜನುಮ ಘಳಿಗೆಯಲ್ಲಿ ನೋವು ನರಕ ಕೊಟ್ಟೆನು |

ಅಂಥ ಅಮ್ಮ ಮಮತೆ ಅಮ್ಮ ಸತ್ತು ಹೋದರೆ
ಕೃತಘ್ನ ನಾನು ನೆನಪಿನಲ್ಲಿ ಏನು ಮಾಡಿದೆ
ಸ್ತ್ರೀ ಕುಲದ ಮೇಲೆ ಗಂಡು ಇನ್ನು ಕುಣಿಯುತಿರುವನು

ಸ್ತ್ರೀಹಕ್ಕು ಸ್ವಾತಂತ್ರ್ಯವ ತುಳಿಯುತಿರುವನು
ವಿಶ್ವವಿಡೀ ಅವನ ತೃಷೆ ಅಂಕೆಯಿಲ್ಲದಲೆಯುತಿದೆ |
ನಾಚಿ ನೀರಾಗಿರುವೆ ಓ ಗೋರಿ
ಬೇಗ ಬೇಗ ಮುಚ್ಚು ಬಾಗಿಲು |

ಮೂಲ : ಜಾನ್ ಮೇಸ್‍ಫೀಲ್ಡ್
ಕನ್ನಡಕ್ಕೆ : ಡಾ. ಬಿ.ಆರ್. ಮಂಜುನಾಥ್

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *