ಆರೋಗ್ಯ / ಅಮ್ಮನಂತೆ ಆಲೋಚಿಸೋಣ!- ಡಾ. ಕೆ.ಎಸ್. ಪವಿತ್ರ
ತಮ್ಮ ಕೈಯ್ಯ
ಲ್ಲಿ ಆಗುವುದಿಲ್ಲವೆಂದು ಸುಮ್ಮನೆ ಕುಳಿತಿರದೆ,
ತಾವೇ ಪರಿಹಾರ ಎಂದುಕೊಂಡು, ತಕ್ಷಣ ಕಾರ್ಯೋನ್ಮುಖರಾಗುವುದು
ಅಮ್ಮಂದಿರಿಗಲ್ಲದೆ ಯಾರಿಗೆ ಹೊಳೆಯಲು ಸಾಧ್ಯ? ಕೊರೋನಾದಿಂದ ಇಡೀ ದೇಶ ಕಂಗಾಲಾಗಿರುವ ಈ ಸಮಯದಲ್ಲಿ ನಾವು
ಅಮ್ಮನಂತೆಯೇ ಯೋಚಿಸಬೇಕಾಗಿದೆ. ಅಮ್ಮನಂತೆ ನಾಳೆ ಮತ್ತೇನೋ ಒಳ್ಳೆಯದು ಕಾದಿದೆ ಎಂಬ ನಂಬಿಕೆಯಿಂದ ಇಂದಿನ ಸಂಕಷ್ಟವನ್ನು ಸಹಿಸಿಕೊಳ್ಳಬೇಕಾಗಿದೆ.
ಅಮ್ಮನಂತೆ ಆಲೋಚಿಸುವುದು ಕೇವಲ
ಮಗುವನ್ನು ಹೊತ್ತು, ಹೆತ್ತ ಅಮ್ಮಂದಿರಿಗೆ ಮಾತ್ರ ಸೀಮಿತವಾಗಬೇಕೆಂದಿಲ್ಲ.
ತಾವೇ
ಕೆಲವು ವರ್ಷಗಳ ಹಿಂದೆ ಪೂರ್ವ ಆಫ್ರಿಕಾದ ದೇಶಗಳು ತೀವ್ರ ಬರಗಾಲದಿಂದ ನರಳುತ್ತಿದ್ದವು. ಸೋಮಾಲಿಯಾದ ಮಹಿಳೆಯರು ಹಸಿವಿನಿಂದ ಕೂಗುತ್ತಿದ್ದ ತಮ್ಮ ಮಕ್ಕಳನ್ನು ಎತ್ತಿಕೊಂಡು ಆಹಾರ-ನೀರನ್ನು ಹುಡುಕಿಕೊಂಡು ದಿನಗಟ್ಟಲೆ ಅಲೆಯುವ ಪರಿಸ್ಥಿತಿ. ಅರ್ಧ ಮಿಲಿಯನ್‍ಗಟ್ಟಲೆ ಜನ ಸತ್ತರು. ಅವರಲ್ಲಿ ಅರ್ಧದಷ್ಟು ಜನ ಎರಡು ವರ್ಷದೊಳಗಿನ ಮಕ್ಕಳು. ಈ ದುಃಸ್ಥಿತಿಯನ್ನು ಮೌನವಾಗಿ ಇಡೀ ಜಗತ್ತು ನೋಡುತ್ತಿರುವಾಗ, ಸುಡಾನ್‍ನ ಮಹಿಳಾ ರೈತರ ಒಂದು ತಂಡವೂ ಈ ಪರಿಸ್ಥಿತಿಯ ಬಗ್ಗೆ ಪತ್ರಿಕೆ-ಟಿ.ವಿ. ಗಳಲ್ಲಿ ಗಮನಿಸಿತು. ಸೋಮಾಲಿ ತಾಯಂದಿರಿಗಾಗಿ ತಾವು ಜೋಳ ಬೆಳೆದು ಉಳಿಸಿದ್ದ ಹಣವನ್ನೆಲ್ಲಾ ಒಟ್ಟುಗೂಡಿಸಿ, ಆಹಾರ-ನೀರಿಗಾಗಿ ಕಳುಹಿಸಿತು. ತಾವೂ ಬಡವರೇ ಆಗಿದ್ದ ಈ ರೈತ ಮಹಿಳೆಯರನ್ನು, ಹಾಗೆ ಮಾಡಲು ಪ್ರೇರೇಪಿಸಿದ್ದಾದರೂ ಏನು? ತಮಗೇ ವಿದ್ಯುತ್ ಇಲ್ಲದೆ, ಮೂಲಭೂತ ಸೌಲಭ್ಯಗಳಿಲ್ಲದೆ ಬದುಕುತ್ತಿದ್ದ, ಅವರು ಹಾಗೆ ಮಾಡಲು ಕಾರಣವಾದರೂ ಏನು? ತಾಯಿ ಬುದ್ಧಿ!! ತಮ್ಮ ಕೈಯ್ಯಲ್ಲಾಗುವುದಿಲ್ಲವೆಂದು ಸುಮ್ಮನೆ ಕುಳಿತಿರದೆ, ಪರಿಹಾರ ಎಂದುಕೊಂಡು, ತಕ್ಷಣ ಕಾರ್ಯೋನ್ಮುಖರಾಗುವುದು
ಅಮ್ಮಂದಿರಿಗಲ್ಲದೆ ಯಾರಿಗೆ ಹೊಳೆಯಲು ಸಾಧ್ಯ?
ನಮ್ಮ ಬಾಲ್ಯದಲ್ಲಿ ಅಥವಾ ದೊಡ್ಡವರಾದ ಮೇಲೂ ಜೀವನದಲ್ಲಿ ವೈಯಕ್ತಿಕವಾಗಿ ಅಥವಾ ಇಡೀ ಕುಟುಂಬಕ್ಕೆ ಏನಾದರೂ ಕಷ್ಟದ ಸಂದರ್ಭಗಳು ಬಂದಿರುತ್ತವಷ್ಟೆ. ಆಗೆಲ್ಲಾ ಸಾಮಾನ್ಯವಾಗಿ ಅಮ್ಮಂದಿರು ಹೇಳುವುದೇನು? `ಏನೋ ಒಳ್ಳೆಯದಾಗುವುದಕ್ಕೇ ಇದೆಲ್ಲಾ ಆಗುತ್ತಿದೆ ಎನಿಸುತ್ತದೆ. ಈಗ ಅದು ನಮಗೆ ಗೊತ್ತಾಗುತ್ತಿಲ್ಲ ಅಷ್ಟೆ!'. ಈ ಮಾತು ಆಗ ಸುಮ್ಮನೇ ಸಮಾಧಾನಕ್ಕೆ ಹೇಳುತ್ತಿದ್ದಾರೆ ಎನಿಸಿದರೂ ಅದು ನಮ್ಮಲ್ಲಿ ಒಳ್ಳೆಯದಾಗುವುದರ ಸಾಧ್ಯತೆಯ ಬೀಜವನ್ನು ಬಿತ್ತುತ್ತದೆ.
`ಒಳ್ಳೆಯದು ಬರುತ್ತಿದೆ’ ಎಂಬ ಭರವಸೆಯನ್ನು ಮೂಡಿಸಿ, ಸಂಕಷ್ಟವನ್ನು ಸಹನೀಯ ಎನಿಸುವಂತೆ ಮಾಡುತ್ತದೆ. ನಾವು ಸ್ವತಃ ತಾಯಂದಿರಾದಾಗಲೂ ಅಷ್ಟೆ. ಹಾಗೆ ಭರವಸೆಯನ್ನು ಹುಟ್ಟಿಸುವುದು ನಮ್ಮ ಜವಾಬ್ದಾರಿ ಎಂಬ ಭಾವವನ್ನು ಅಮ್ಮನಾದವಳು ಅನುಭವಿಸುತ್ತಾಳೆ. ಈ ಭಾವವೇ ನರಳುವಿಕೆಯಾಚೆಗೂ ನಮಗೆ ನೋಡುವುದನ್ನು ಸಾಧ್ಯ ಮಾಡುತ್ತದೆ.
ಅಮ್ಮನಂತೆ ಆಲೋಚಿಸುವುದು ಕೇವಲ
ಮಗುವನ್ನು ಹೊತ್ತು, ಹೆತ್ತ ಅಮ್ಮಂದಿರಿಗೆ ಮಾತ್ರ ಸೀಮಿತವಾಗಬೇಕೆಂದಿಲ್ಲ. ಅಥವಾ ಹಾಗೆ ಜೈವಿಕ ಅರ್ಥದಲ್ಲಿ ಅಮ್ಮಂದಿರಿಗೆ ಮಾತ್ರ ಸೀಮಿತವಾಗಬೇಕೆಂದಿಲ್ಲ. ಅಥವಾ ಹಾಗೆ ಜೈವಿಕ ಅರ್ಥದಲ್ಲಿ ಅಮ್ಮಂದಿರಿಗೆ ರೀತಿಯ ಆಲೋಚನೆ ಸಾಧ್ಯವಾಗಲೇಬೇಕೆಂದೇನೂ ಇಲ್ಲ. ಇತರರ ಅವಶ್ಯಕತೆಗಳನ್ನು ಅರ್ಥ ಮಾಡಿಕೊಳ್ಳುವ, ಉದ್ವೇಗ-ನಿರಾಶೆಗಳಿಗೊಳಗಾಗದೆ ಚಿಕ್ಕ-ದೊಡ್ಡ ಬಿಕ್ಕಟ್ಟುಗಳನ್ನು ಎದುರಿಸುವ, ಸರಳ ಆದರೆ ಪ್ರಬಲವಾದ ಈ ಆಲೋಚನಾ ಕ್ರಮವನ್ನು ಮಹಿಳೆಯಾಗದೆಯೂ, ತಾಯಿಯಾಗದೆಯೂ, ಮಾನವೀಯ ಹೃದಯವುಳ್ಳ ಯಾರೂ ರೂಢಿಸಿಕೊಳ್ಳಬಹುದು. ಪ್ರಕೃತಿ ವಿಕೋಪಗಳಲ್ಲಿ, ಮುಗಿಯದ ಯುದ್ಧಗಳ ಸಮಯದಲ್ಲಿ, ತೀವ್ರ ಆರ್ಥಿಕ ಮುಗ್ಗಟ್ಟಿನ ಪರಿಸ್ಥಿತಿಯಲ್ಲಿ, ನಮ್ಮ ಜಗತ್ತು ಗೆದ್ದು ಬಂದಿರುವುದೇ
`ಅಮ್ಮ’ನಂತೆ ಆಲೋಚಿಸುವುದರಿಂದ.
ಮನೆಯ ಹಲವು ವ್ಯವಹಾರಗಳನ್ನು ನಿಭಾಯಿಸುವಾಗ `ಅಮ್ಮ' ಏನು ಮಾಡುತ್ತಾಳೆ? ತನ್ನ ಮನೆಯ ಹಿತಕ್ಕಾಗಿ, ಮಕ್ಕಳಿಗಾಗಿ ಕೆಲವು ಗಟ್ಟಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾಳೆ. ಅವರು ಸಹಾಯ ಮಾಡಲಿ, ಇವರು ತನ್ನ ಬೆಂಬಲಕ್ಕೆ ಬಂದು ನಿಲ್ಲಲಿ ಎಂದು ಕಾಯುವುದಿಲ್ಲ. ಮಕ್ಕಳ ಆರೋಗ್ಯದ ಬಗ್ಗೆ ತಾನೂ ವೈದ್ಯೆಯಾಗದೆಯೂ, ಶಿಕ್ಷಣದ ಕುರಿತು ತಾನು ಶಿಕ್ಷಕಿಯಾಗದೆಯೂ, ಮಕ್ಕಳ ಭಾವನೆಗಳ ಬಗ್ಗೆ ತಾನು ಮನೋವಿಜ್ಞಾನಿಯಾಗದೆಯೂ ಅವಶ್ಯಕತೆ-ಅಪಾಯಗಳನ್ನು ಗಮನಿಸುತ್ತಾಳೆ.
ಅಮ್ಮನಂತೆ ಆಲೋಚಿಸುವುದರ ಹಿಂದೆ ಇರುವುದು ನಿಸ್ಸಂಶಯವಾಗಿ ಷರತ್ತುಗಳಿಲ್ಲದೇ, ನಿರೀಕ್ಷೆಗಳಿಲ್ಲದ ಪ್ರೀತಿ. ಜೊತೆಗೇ ಅಂಥ ಪ್ರೀತಿಯ ಮಧ್ಯೆಯೇ ಗಟ್ಟಿಯಾದ ನಿರ್ಧಾರ ತೆಗೆದುಕೊಳ್ಳುವ ಸಾಮಥ್ರ್ಯ. ಅಮ್ಮನಿಗೆ ತಾನು ಮಕ್ಕಳ ಒಳ್ಳೆಯದಕ್ಕೇ, ಕುಟುಂಬದ ಒಳಿತಿಗೇ ಏನನ್ನಾದರೂ ಮಾಡುತ್ತೇನೆಂಬ ದೃಢ ವಿಶ್ವಾಸವಿದೆ, ಅನುಮಾನವಿಲ್ಲ, ಹಾಗಾಗಿಯೇ ಅವಳು ಮುನ್ನುಗ್ಗಿ ಎಲ್ಲವನ್ನೂ ಮಾಡಬಲ್ಲಳು. ಕೊರೋನಾದಿಂದ ಇಡೀ ದೇಶ ಕಂಗಾಲಾಗಿರುವ ಈ ಸಮಯದಲ್ಲಿ ನಾವು
ಅಮ್ಮನಂತೆಯೇ ಯೋಚಿಸಬೇಕಾಗಿದೆ. ಅಮ್ಮನಂತೆ ನಾಳೆ ಮತ್ತೇನೋ ಒಳ್ಳೆಯದು ಕಾದಿದೆ ಎಂಬ ನಂಬಿಕೆಯಿಂದ ಇಂದಿನ ಸಂಕಷ್ಟವನ್ನು ಸಹಿಸಿಕೊಳ್ಳಬೇಕಾಗಿದೆ. ಸಂಕಷ್ಟಗಳಿಂದ ನಾಳಿನ ಬದುಕಿಗೆ ಮತ್ತಷ್ಟು ಪಾಠ ಕಲಿತು ಗಟ್ಟಿಯಾಗಬೇಕಾಗಿದೆ. ಕಷ್ಟದ ಸಮಯದಲ್ಲಿ ನಾವು ಹೇಗೆ ಸ್ಪಂದಿಸುತ್ತೇವೆ ಎಂಬುದೇ ನಮ್ಮ ವ್ಯಕ್ತಿತ್ವವನ್ನು ನಿರ್ಧರಿಸುತ್ತದೆ. ಅಮ್ಮನಂತೆ ಆಲೋಚಿಸಲು ಹೀಗೆ ಮಾಡಿ.
• ಈ
ಕೆಟ್ಟ ಪರಿಸ್ಥಿತಿ ತಾತ್ಕಾಲಿಕ, ಒಳ್ಳೆಯ ದಿನಗಳು ಮುಂದೆ ಕಾದಿವೆ ಎಂದು ದೃಢವಾಗಿ ನಂಬಿ.
• ಚಿಕ್ಕ ಚಿಕ್ಕ ಸಂಗತಿಗಳೂ ಅಪಾರ ಸಂತೋಷ ನೀಡಬಲ್ಲವು. ಒಂದು ಗುಡ್ ಮಾರ್ನಿಂಗ್', ಅರಳಿದ ಹೂವನ್ನು ನೋಡುವುದು ಇತ್ಯಾದಿ.
• ನಿಮಗಿರುವ ಆಹಾರ-ಆಶ್ರಯ-ಸೌಲಭ್ಯಗಳ ಬಗ್ಗೆ ಕೃತಜ್ಞತೆಯಿರಲಿ. ನೀವು ಇತರರೊಂದಿಗೆ ಮಾತನಾಡುವಾಗಲೂ ನಿರಾಶಾತ್ಮಕವಾಗಿ ಮಾತನಾಡದೆ, ಮುಂದಿನ ದಿನಗಳ ಬಗ್ಗೆ
ಪಾಸಿಟಿವ್’ ಆಗಿ ಮಾತನಾಡಿ. ನೆನಪಿರಲಿ, ನಿರಾಶೆ -ಆಶಾವಾದಗಳೆರಡೂ ಸಾಂಕ್ರಾಮಿಕವೇ!
• ನಿಮಗೆ ಯಾವುದನ್ನು ನಿಯಂತ್ರಿಸಲು ಸಾಧ್ಯ, ಅದರ ಬಗ್ಗೆ ಗಮನ ನೀಡಿ. ಯಾವುದನ್ನು ನಿಯಂತ್ರಿಸಲು ಸಾಧ್ಯವಿಲ್ಲವೋ ಅದನ್ನು ಒಪ್ಪಿಕೊಳ್ಳುವುದೇ ಸರಿ. ನಿಮ್ಮ ನಿಯಂತ್ರಣದಲ್ಲಿರುವ ವ್ಯಾಯಾಮ ಮಾಡುವುದು, ಸರಿಯಾದ ಸಮಯಕ್ಕೆ ಏಳುವುದು, ಮನೆ ಕೆಲಸದಲ್ಲಿ ಸಹಾಯ, ಓದುವುದು ಇತ್ಯಾದಿಗಳ ಒಂದು ಪಟ್ಟಿ ತಯಾರಿಸಿ, ನಿಮ್ಮ ಶಕ್ತಿಯನ್ನೆಲ್ಲಾ ಅದಕ್ಕಾಗಿ ವ್ಯಯಿಸಿ.
• `ಕ್ಷಮೆ'ಯನ್ನು ಕಲಿತುಕೊಳ್ಳಿ. ತಪ್ಪು ನಿಮ್ಮದಲ್ಲದಿದ್ದರೂ ಕ್ಷಮೆ ಕೇಳುವುದು, ಬೇರೆಯವರ ತಪ್ಪಿದ್ದರೂ ಕ್ಷಮಿಸುವುದು ಎರಡೂ ಖಂಡಿತಾ ಅಮ್ಮನ ಗುಣಗಳೇ! ಅಮ್ಮ ಮತ್ತೆ ಮತ್ತೆ ಮಾಡುವಂತಹವೇ! ಕಷ್ಟದ ದಿನಗಳು ಇಲ್ಲಿವೆ. ಆದರೆ
ಅಮ್ಮ’ನಂತೆ ಆಲೋಚಿಸುವುದರಿಂದ ವೈಯಕ್ತಿಕವಾಗಿ, ಜಾಗತಿಕವಾಗಿ ನಾವು ಅವುಗಳಿಂದ ಹೊರ ಬರಲು ಸಾಧ್ಯವಿದೆ. ಹಾಗಾಗಿ `ಅಮ್ಮ’ನಂತೆ ಆಲೋಚಿಸೋಣ, ಬಹುಕಾಲ ಬಾಳೋಣ.
- ಡಾ. ಕೆ.ಎಸ್. ಪವಿತ್ರ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.