Latestಚಾವಡಿಸಂವಾದ

ಅಭಿವೃದ್ಧಿ ತಜ್ಞೆ ಡಾ. ದೇವಕಿ ಜೈನ್ ರವರೊಂದಿಗೆ ಸಂವಾದ

ಪ್ರಖ್ಯಾತ ಸ್ತ್ರೀವಾದಿ ಮತ್ತು ಅಭಿವೃದ್ಧಿ ಅರ್ಥಶಾಸ್ತ್ರಜ್ಞೆ ಪದ್ಮಭೂಷಣ ಡಾ| ದೇವಕಿ ಜೈನ್ ರವರು ಬರೆದ  ‘Close Encounters of Another Kind – Women and Development Economics’ ಪುಸ್ತಕವು ಇತ್ತೀಚೆಗೆ ಬೆಂಗಳೂರಿನ ಇಂಡಿಯನ್       ಇನ್ ಸ್ಟಿಟ್ಯೂಟ್ಟ್ ಆಫ್ ಹ್ಯೂಮನ್ ಸೆಟೆಲ್ ಮೆಂಟಿನಲ್ಲಿ  ಬಿಡುಗಡೆಯಾಯಿತು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ಅರೋಮರಾ ರೆವಿಯವರು ದೇವಕಿ ಜೈನ್ ರವರೊಡನೆ ಚರ್ಚೆಯನ್ನು ನಡೆಸಿದರು ಮತ್ತು ಸಭೆಯಲ್ಲಿದ್ದ ಸ್ತ್ರೀವಾದಿಗಳು, ಶಿಕ್ಷಣವೇತ್ತರು ಮತ್ತು ಹೋರಾಟಗಾರ್ತಿಯರು ದೇವಕಿ ಜೈನ್ ರವರೊಡನೆ ಸಂವಾದದಲ್ಲಿ ಭಾಗಿಯಾಗಿದ್ದರು. ಆ ಸಂವಾದದ ಒಂದು ಚಿಕ್ಕ ಟಿಪ್ಪಣಿ ಇಲ್ಲಿದೆ:

ಪ್ರಶ್ನೆ : ಮಹಿಳೆಯರ ಕುರಿತ ಅಭಿವೃದ್ಧಿ ಸಿದ್ಧಾಂತಗಳು ಮತ್ತು ಅವುಗಳ ಅನ್ವಯಿಕತೆಗೆ ಮಹಿಳೆಯರ ಬದುಕಿನ ಅನುಭವದಿಂದ ಯಾವ ರೀತಿ ಒಳನೋಟವನ್ನು ಪಡೆಯುತ್ತೀರ?

ದೇವಕಿ :  ’ಅಭಿವೃದ್ಧಿ ಮತ್ತು ಮಹಿಳೆ’ ಯ ಕ್ಷೇತ್ರವನ್ನು ಶೋಧಿಸುವಾಗ ನಮಗೆ ಈಗ ಮಾಡುತ್ತಿರುವ ಹಲವಾರು ತಪ್ಪುಗಳನ್ನು ಎದುರಿಸಬೇಕಾಗುತ್ತದೆ. ಅದು ಈ ಸಮಸ್ಯೆಯನ್ನು , ಅದರ ವಿನ್ಯಾಸವನ್ನು ಅರ್ಥಮಾಡಿಕೊಳ್ಳುವುದಾಗಿರಬಹುದು, ಇಲ್ಲವೆ ಈ ಸಮಸ್ಯೆ ಎಲ್ಲಿದೆ, ಎಂದು ಗುರುತಿಸುವುದಾಗಿರಬಹುದು, ಇನ್ನು ಮುಂದುವರಿದಂತೆ ನಾವು ಆ ಸಮಸ್ಯೆಗೆ ಏನು ಹೆಸರು ಕೊಡುತ್ತೇವೆ, ಎಂಬುದಾಗಿರಬಹುದು – ಈ ಸಂಗತಿಗಳನ್ನು ಗಮನವಿಟ್ಟು ನೋಡಬೇಕಾಗುತ್ತದೆ. ಪ್ರತಿಯೊಂದು ಪದಕ್ಕೂ ಒಂದು ಅರ್ಥವಿರುತ್ತದೆ. ಅದರ ಅರ್ಥವ್ಯಾಪ್ತಿ ಆ ವಿಷಯದ ಬಗೆಗಿನ ನಿರ್ದಿಷ್ಟ ಧೋರಣೆಯನ್ನು ಸೂಚಿಸುತ್ತದೆ. ಉದಾಹರಣೆಗೆ, ಅರಣ್ಯವನ್ನು ಆಧರಿಸಿದ ಕಾರ್ಖಾನೆಯನ್ನು ಕುರಿತು IIST ಯವರು ನಡೆಸಿರುವ ಅಧ್ಯಯನವನ್ನು ನೋಡುತ್ತಿದ್ದೆ. ಈ ಅಧ್ಯಯನದಲ್ಲಿ ಅರಣ್ಯ ಪ್ರದೇಶದಲ್ಲಿ ವಾಸಿಸುವ ಮಹಿಳೆಯರನ್ನು ಕುರಿತು ’ಮಹಿಳೆಯರು ವಸ್ತುಗಳನ್ನು ಉಚಿತವಾಗಿ ಸಂಗ್ರಹಿಸುತ್ತಿದ್ದರು.’ ಎಂದು ಹೇಳಲಾಗಿತ್ತು. ಅವರು ಎಲೆಗಳನ್ನು, ಹಣ್ಣು ಹಂಪಲುಗಳನ್ನು, ಅಂಟು ಮುಂತಾದವನ್ನು ಸಂಗ್ರಹಿಸಿ ಹೊರಗೆ ಮಾರುತ್ತಿದ್ದರು.ಈ ಕಸಬು ಅವರಿಗೆ ಆದಾಯವನ್ನು ಕೊಡುತ್ತಿತ್ತು. ಇದರಿಂದ ದೇಶದ GDP ಗೆ ಕೊಡುಗೆಯಿದ್ದರೂ ಇದನ್ನು ’ಚಿಕ್ಕ ಕೆಲಸ’ ಎಂದೇ ಕರೆಯುತ್ತಿದ್ದರು. ಈ ಕೆಲಸವನ್ನು ’ಉದ್ಯೋಗ’ ಎಂದ ಪರಿಗಣಿಸದೇ ಇದ್ದುದರಿಂದ ಮತ್ತು ಈ ಕೆಲಸಕ್ಕೆ ಯಾವುದೇ ಸಾಮಾಜಿಕ ಸ್ಥಾನಮಾನ ಇಲ್ಲದಿರುವುದರಿಂದ ಅವರಿಗೆ ಸಿಗಬೇಕಾದ ಗಮನವನ್ನು ಯಾರೂ ಕೊಡುತ್ತಿರಲಿಲ್ಲ.  ಈ ಕಾರಣಕ್ಕೆ ಅವರನ್ನು ಶೋಷಣೆಗೆ ಗುರಿಪಡಿಸುತ್ತಿದ್ದರು ಮತ್ತು ಅವರಿಗೆ ಯಾವುದೇ ರೀತಿಯ ಕಾನೂನಿನ ರಕ್ಷಣೆಯೂ ಸಿಕ್ಕುತ್ತಿರಲಿಲ್ಲ. ಅದೇ ಅರಣ್ಯನಾಶ ಮಾಡಬೇಕಾದಾಗ ದೊಡ್ಡ ದೊಡ್ಡ ಮರಮುಟ್ಟುಗಳನ್ನು ಕಡೆಯುವುದನ್ನು ’ದೊಡ್ಡ ಕೆಲಸ’ ಎಂದು ಕರೆಯಲಾಗುತ್ತದೆ. ಆದ್ದರಿಂದಲೇ ಅಭಿವೃದ್ಧಿ ಸಿದ್ಧಾಂತದಲ್ಲಿ ಇರುವ ಪರಿಕಲ್ಪನೆಗಳು ಮತ್ತು ಶಬ್ಧಕೋಶವೇ ಹಲವಾರು ವೈರುಧ್ಯಗಳಿಂದ ಕೂಡಿದೆ, ಎಂದು ನಾನು ಹೇಳುವುದು.

ಪ್ರಶ್ನೆ : ನಮ್ಮ ದೇಶದಲ್ಲಿ ಜೆಂಡರ್ ಮತ್ತು ಬಡತನವನ್ನು ಕುರಿತ ಅಧ್ಯಯನದ ಬಗ್ಗೆ ನಿಮ್ಮ ಅಭಿಪ್ರಾಯವೇನು?

ದೇವಕಿ : ವಿಶ್ವಬ್ಯಾಂಕ್ ಮೊಟ್ಟ ಮೊದಲ ಬಾರಿಗೆ ಭಾರತದಲ್ಲಿ ಜೆಂಡರ್ ಮತ್ತು ಬಡತನವನ್ನು ಕುರಿತಂತೆ ಸಮಗ್ರವಾದ ವರದಿಯೊಂದನ್ನು ೧೯೯೧ರಲ್ಲಿ ಸಿದ್ಧಗೊಳಿಸಿತು. ಈ ವರದಿಯಿಂದಾಗಿ  ಹೆಣ್ಣಿಗೆ ಸಂಬಂಧಪಟ್ಟ ಈ ಅಂಶ ಹೊರಕ್ಕೆ ಢಾಳಾಗಿ ಕಾಣುವಂತಾಯಿತು. ಆದರೆ ಈ ವರದಿ ಸಮಗ್ರ ದೃಷ್ಟಿಕೋನವನ್ನು ಹೊಂದಿದ್ದೇನೆಂದು ಭಾವಿಸಿದರೂ ನಿಜಾರ್ಥದಲ್ಲಿ ಅದು ಸಮಸ್ಯೆಯನ್ನು ಚಿಕ್ಕ ಹಂತದಲ್ಲಿ ಮಾತ್ರ ನೋಡಿತ್ತು. ಮಹಿಳೆಯರ ದುಸ್ಥಿತಿಯನ್ನು ಅಂದಾಜುಮಾಡುವಲ್ಲಿ ಸೋತಿತ್ತು ಎಂದೇ ನನ್ನ ಅಭಿಪ್ರಾಯವಾಗಿದೆ.

ಪ್ರಶ್ನೆ: ಮಹಿಳೆಯರ ದುಡಿಮೆಯನ್ನು ಮಾಪನ ಮಾಡಲು ಯಾವ ಮಾರ್ಗಗಳು ಸಾಧುವಾದವು?

ದೇವಕಿ : IIST ಯು ೧೯೮೨ರಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ದುಡಿಮೆಯನ್ನು ’ದುಡಿಮೆಯ ಕಾಲ’ವನ್ನು ಬಳಸಿ ಅಧ್ಯಯನ ಮಾಡಿದುದರ ಉದ್ದೇಶ ಅಲ್ಲಿಯವರೆಗೂ ದುಡಿಮೆಯಲ್ಲಿ ಭಾಗವಹಿಸುವವರ ಅಂಕಿ ಸಂಖ್ಯೆಗಳನ್ನು ತಿದ್ದುವುದೇ ಆಗಿತ್ತು. ಮುಂಚಿನ ಅಧ್ಯಯನ ವಿಧಾನಗಳಲ್ಲಿ ದೋಷಗಳಿದ್ದವು. ಮಹಿಳೆಯ ನಿಜವಾದ ದುಡಿಮೆಯ ಪ್ರಮಾಣವನ್ನು ಸರಿಯಾಗಿ ಲೆಕ್ಕ ಹಾಕಿರಲಿಲ್ಲ. IIST ಯ ಅಧ್ಯಯನ ವಿಧಾನದಲ್ಲಿ ಮಹಿಳೆಯರ ದುಡಿಮೆಯನ್ನು ದಿನಕ್ಕೆ ೧೬ ಗಂಟೆಯಂತೆ ವಾರಕ್ಕೆ ಲೆಕ್ಕ ಹಾಕಿ ಅಧ್ಯಯನ ನಡೆಸಲಾಯಿತು. ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳದ ಕೆಲವು ಕುಟುಂಬಗಳನ್ನು ಅಧ್ಯಯನಕ್ಕೊಳಪಡಿಸಲಾಯಿತು. ಈ ಅಧ್ಯಯನವು ಹೆಣ್ಣಿನ ದುಡಿಮೆಯ ಹಲವಾರು ಒಳನೋಟಗಳನ್ನು ಕೊಟ್ಟಿತು. ಮಹಿಳೆಯರು  ದುಡಿಯುವ ಕಾಲವನ್ನು ಮಾಪನವಾಗಿಟ್ಟುಕೊಂಡಾಗ ಅವರ ದುಡಿಮೆಯಲ್ಲಿ ಯಾವುದು ಆರ್ಥಿಕವಾಗಿ ಬೆಲೆಯುಳ್ಳದ್ದು ಮತ್ತು ಗೃಹಕೃತ್ಯದ ಜವಾಬ್ದಾರಿಗಳಾದ ನೀರು ತರುವುದು, ಅಡಿಗೆ ಮಾಡುವುದು, ಸ್ವಚ್ಛಮಾಡುವುದು ಮತ್ತು ಮಕ್ಕಳ ಲಾಲನೆ, ಪಾಲನೆ ಇತ್ಯಾದಿಯನ್ನು ಗಣನೆಗೆ ತೆಗೆದುಕೊಳ್ಳಲಾಯಿತು. ಬಡತನವಿರುವ ಎಷ್ಟೋ ಕುಟುಂಬಗಳಲ್ಲಿ ಮಹಿಳೆಯರು ಮತ್ತು ಅವರ ಹೆಣ್ಣು ಮಕ್ಕಳು ದಿನಕ್ಕೆ ೧೮ ಗಂಟೆಗಳಷ್ಟು ಕಾಲವು ದುಡಿಮೆಯಲ್ಲಿ ತೊಡಗಿಕೊಂಡಿದ್ದಿದೆ.

ಪ್ರಶ್ನೆ : ಆಹಾರಕ್ಕಾಗಿ ಹೋರಾಟವನ್ನೇ ಮಾಡಬೇಕಾಗಿದೆಯೆಂದೆನಿಸುತ್ತದೆಯಲ್ಲವೆ?

ದೇವಕಿ : ಈ ವಿಷಯವನ್ನು ಯೋಚಿಸುವಾಗ ಕೆಲವೊಮ್ಮೆ ನನಗೆ ದಿಗ್ಭ್ರಮೆಯಾಗುತ್ತದೆ: ಹಸಿವಿನ ಬಗ್ಗೆ ನಮ್ಮಲ್ಲಿ ಅದೆಷ್ಟೊಂದು ತಿಳುವಳಿಕೆಯಿದ್ದರೂ ಮಿಲಿಯನ್ ಗಟ್ಟಲೆ ಜನರು ಕಂಗೆಟ್ಟಿದ್ದಾರೆ. ಆದರೂ ಆರ್ಥಿಕವಾಗಿ ಕೆಳಗಿರುವವರಿಗೆ ಆಹಾರದ ಬೆಲೆಯು ಕೈಗೆಟುಕುವುದೇ ಇಲ್ಲ. ಆದ್ದರಿಂದಲೇ  ಕೃಷಿಯಲ್ಲಿ ತೊಡಗಿರುವವರನ್ನು ನಮ್ಮ ಆರ್ಥಿಕತೆಯಲ್ಲಿ ಎರಡನೇ ದರ್ಜೆಯ ಪ್ರಜೆಗಳೆಂದು ಭಾಷಣಗಳಲ್ಲಿ ಆಕರ್ಷಕವಾಗಿ ಹೇಳುತ್ತಿರುತ್ತೇವೆ. ನಮ್ಮ ಹಿರಿಯ ನೀತಿ ನಿರೂಪಕರು ಒಮ್ಮೆ ಹೇಳಿದ್ದುಂಟು: ಬೇಸಾಯವು ’ಸೂರ್ಯಾಸ್ತಮಾನದ ಕಾರ್ಖಾನೆ’ ಮತ್ತು ವಿದ್ಯುನ್ಮಾನ ಶಾಸ್ತ್ರವು ’ಸೂರ್ಯೋದಯ ಕಾರ್ಖಾನೆ’ ಎಂಬುದಾಗಿ. ಭಾರತದ ಪರಿಸ್ಥಿತಿಯು ಈ ವೈರುಧ್ಯಗಳನ್ನು ಚೆನ್ನಾಗಿ ಬಣ್ಣಿಸುತ್ತದೆ. ಇಲ್ಲಿ ಮಿಲಿಯನ್ ಟನ್ನುಗಳಷ್ಟು ಆಹಾರ ಉತ್ಪಾದನೆಯಾಗುತ್ತದೆ. ಹಾಗೆಯೇ ಇಲ್ಲಿಯೇ ಮಿಲಿಯನ್ನುಗಟ್ಟಲೆ ಜನರು ಹಸಿವಿನಿಂದ ಬದುಕುತ್ತಿದ್ದಾರೆ.

ಪ್ರಶ್ನೆ : ’ಅಭಿವೃದ್ಧಿ’ ಎನ್ನುವ ಮಂತ್ರ ಮತ್ತು ಅದರ ತಿಳುವಳಿಕೆ ಇಂದು ವ್ಯರ್ಥವೆನಿಸುತ್ತಿದೆಯೇ?

ದೇವಕಿ : ೧೯೬೦ರಿಂದಲೂ ನಾನು ’ಅಭಿವೃದ್ಧಿ’ ಎನ್ನುವ ಹೆಸರಿನೊಂದಿಗೇ ಬದುಕಿದ್ದೇನೆ. ’ಅಭಿವೃದ್ಧಿ’ ಎನ್ನುವ ಪದ ಹುಟ್ಟಿದ್ದೇ ’ಅನಭಿವೃದ್ಧರಾಷ್ಟ್ರ’ಗಳನ್ನು  ಅಥವ ಹಿಂದಿನ ಕಾಲೊನಿಗಳನ್ನು ಕುರಿತು. ಆರ್ಥಿಕ ಲಾಭವನ್ನು ಮೀರಿದ ಪದ ಅಭಿವೃದ್ಧಿ. ಅದು ಆರ್ಥಿಕ ಪ್ರಗತಿ ಮತ್ತು ಆರ್ಥಿಕ ಬೆಳವಣಿಗೆಯೆಂಬುದಕ್ಕಿಂತ ಹೆಚ್ಚಿನದು. ನನ್ನ ಜೀವನದುದ್ದಕ್ಕೂ ನಮ್ಮ ಅಭಿವೃದ್ಧಿ ನೀತಿಯನ್ನು ಅರ್ಥಮಾಡಿಕೊಳ್ಳುವಲ್ಲಿ, ಪುನರ್ರಚಿಸುವಲ್ಲಿ ಮತ್ತು ಅದಕ್ಕಾಗಿ ವಾದಿಸುವಲ್ಲಿ ನಾನು ಬೇಸತ್ತಿದ್ದೇನೆ. ಇಂದು ಅಭಿವೃದ್ಧಿ ಎನ್ನುವ ಹೆಸರಲ್ಲಿ ಏನೂ ಬದಲಾಗಿಲ್ಲ. ನನ್ನ ಸಮುದಾಯಕ್ಕೆ , ಅದರಲ್ಲೂ ವಿಶೇಷವಾಗಿ ಬಡ ಹೆಣ್ಣುಮಕ್ಕಳ ವಿಷಯದಲ್ಲಿ ಈ ಅಭಿವೃದ್ಧಿ ಎನ್ನುವುದು ಯಾವ ಪರಿಣಾಮವನ್ನು ಬೀರಿಲ್ಲ. ನಮ್ಮೆಲ್ಲ ವಿಶ್ಲೇಷಣೆ ಮತ್ತು ಅಧ್ಯಯನಗಳು ಮಹಿಳೆಯರ ಪಾಲಿಗೆ ಅಭಿವೃದ್ಧಿಯನ್ನು ದೊರಕಿಸುವಲ್ಲಿ ಯಾವ ಬದಲಾವಣೆಯನ್ನು ಉಂಟುಮಾಡಿಲ್ಲ. ಅದೇ ಜಾಡಿನಲ್ಲಿ ಮುಂದುವರಿಯುತ್ತಿದ್ದೇವೆ. ಇದು ತುಂಬಾ ಗಂಭೀರವಾಗಿ ಪರಿಗಣಿಸಬೇಕಾದ ಸಮಸ್ಯೆಯಾಗಿದೆ.

ಪ್ರಶ್ನೆ : ಇವತ್ತಿನ ಮಹಿಳಾ ಚಳುವಳಿಯ ನಡಿಗೆಯ ಬಗ್ಗೆ ಏನು ಹೇಳುತ್ತೀರ?

ದೇವಕಿ : ಕಳೆದ ದಶಕದಲ್ಲಿ ಮಹಿಳೆಯರು ಮುನ್ನೆಲೆಗೆ ಬಂದು ಅತ್ಯಾಚಾರ, ಕೌಟುಂಬಿಕ ದೌರ್ಜನ್ಯ, ದೈಹಿಕ ಹಿಂಸೆಯನ್ನು ಪ್ರತಿಭಟಿಸಿ ಕಾನೂನಿನ ರಕ್ಷಣೆಗಾಗಿ ಬೀದಿಗಿಳಿದು ಹೋರಾಡುತ್ತಿರುವುದು ಆಶಾದಾಯಕವಾದುದು. ದಲಿತ ಮಹಿಳೆಯರು ಮತ್ತು ಇತರ ದಮನಿತ ಮಹಿಳೆಯರು ಕೂಡ ಚಳುವಳಿಯ ಭಾಗವಾಗುತ್ತಿರುವುದು ಆರೋಗ್ಯಕರವಾದದ್ದು. ಮಹಿಳಾ ಚಳುವಳಿ ಹೆಚ್ಚು ಇಂಕ್ಲೂಸಿವ್ ಆಗುತ್ತಿದೆಯೆನ್ನುವುದು ಸಂತೋಷದ ವಿಷಯವಾದರೂ ನಾವು ದೇಹದ ರಕ್ಷಣೆಯ ಹೋರಾಟವನ್ನು ಸ್ವಲ್ಪ ಪಕ್ಕಕ್ಕಿಟ್ಟು ಹೆಣ್ಣಿನ ದುಡಿಮೆಗೆ ಸಂಬಂಧಪಟ್ಟ ಮತ್ತು ಅವಳ ಹಸಿವಿನ ನಿರ್ಮೂಲನಕ್ಕಾಗಿ ಹೆಚ್ಚು ಒತ್ತುಕೊಡಬೇಕಾಗಿದೆಯೆಂದೆನಿಸುತ್ತದೆ. ಎಂದಿಗೂ ನಾನು ಸಾಮೂಹಿಕ ಚಳುವಳಿಗಳಲ್ಲಿ ನಂಬಿಕೆಯಿಟ್ಟವಳು. ವೈಯಕ್ತಿಕವಾಗಿ ಕೆಲವೊಮ್ಮೆ ಎಷ್ಟೇ ನಿರಾಸೆ, ಬೇಸರ ಉಂಟಾದರೂ ಸಾಮೂಹಿಕ ಒಗ್ಗೂಡುವಿಕೆಯೊಂದೇ ಹೆಣ್ಣಿನ ಸಮಸ್ಯೆಗಳಿಗೆ ಪರಿಹಾರ ನೀಡಲು ಸಾಧ್ಯ. ನಮ್ಮ ಆರ್ಥಿಕ ನೀತಿಯನ್ನು ಮತ್ತು ಯೋಜನಾ ನೀತಿಯನ್ನು ಪ್ರಭಾವಿಸಬಲ್ಲ ಶಕ್ತಿ ಸಾಮೂಹಿಕ ಹೋರಾಟಕ್ಕೆ ಮಾತ್ರ ಸಾಧ್ಯ.

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *