ಅನು ಪಾವಂಜೆ: ಜೀವನೋತ್ಸಾಹದ ಸೃಜನಶೀಲ ಅಭಿವ್ಯಕ್ತಿ
ಆಧುನಿಕ ಜಗತ್ತಿಗೆ ಪರಂಪರಾಗತ ಕಲಾಕೃತಿಗಳ ಮಹತ್ವ ಸಾರುವುದರಲ್ಲಿ ಮಗ್ನರಾಗಿರುವ ಅನು ಪಾವಂಜೆ ಕರಾವಳಿಯ ಪ್ರಖ್ಯಾತ ಪಾವಂಜೆ ಕಲಾವಿದರ ಕುಟುಂಬದಲ್ಲಿ ಅರಳಿದ ಕಲಾವಿದೆ. ಕಣ್ಣಿಗೆ ಹಬ್ಬವೆನಿಸುವ ಮೈಸೂರು ಶೈಲಿ, ಅಂಗೈಅಗಲದಲ್ಲಿ ವಿಸ್ತಾರ ವಿಸ್ಮಯ ನೀಡುವ ಚಿಕಣಿ ಕಲೆ (ಮಿನಿಯೇಚರ್ ಶೈಲಿ), ಸೂಕ್ಷ್ಮ ವಿವರಗಳನ್ನು ಒಳಗೊಂಡ ಆಭರಣಾತ್ಮಕ ಶೈಲಿ ಅವರಿಗೆ ಬಹಳ ಪ್ರಿಯವಾದದ್ದು. ದೇಶವಿದೇಶಗಳಲ್ಲಿ ಕಲಾ ಪ್ರದರ್ಶನಗಳನ್ನು ಮಾಡಿರುವ ಅವರಿಗೆ ನಿರಂತರ ಪ್ರಯೋಗಗಳನ್ನು ಮಾಡುವುದರಲ್ಲಿ ಆಸಕ್ತಿ. ಶ್ರೀಕೃಷ್ಣ ಸೇರಿದಂತೆ ಹಲವು ಪುರಾಣ ಪ್ರಸಿದ್ಧರು ಅವರ ಕಲೆಯಲ್ಲಿ ಸುಂದರವಾಗಿ ಮೂಡಿಬಂದಿದ್ದಾರೆ. ಮಹಿಳೆಯರ ಜೀವನೋತ್ಸಾಹ, ಸೃಜನಶೀಲತೆಯನ್ನು ಬಿಂಬಿಸುವ ಅವರ ಹಲವು ಕಲಾಕೃತಿಗಳಲ್ಲಿ ಇದೂ ಕಣ್ಸೆಳೆಯುತ್ತದೆ.
ಬದುಕು ಎಷ್ಟೇ ಬವಣೆಗಳಿಂದ ತುಂಬಿದ್ದರೂ ಜೀವನಪ್ರೀತಿಯೇ ಮಹಿಳೆಯರ ಮೂಲಸೆಲೆ. ಅವರ ಸ್ನೇಹ ಬಳಗ ಒಟ್ಟಾಗಿ ಸೇರಿದಾಗ ಆ ಜೀವನಪ್ರೀತಿ ಎನ್ನುವುದು ಅಲಂಕಾರದ ಶ್ರದ್ಧೆ, ಹಾಡುವ ಪ್ರೀತಿ, ಕುಣಿಯುವ ಉತ್ಸಾಹ, ವಾದ್ಯದ ಸಖ್ಯ ಇವೆಲ್ಲದರಲ್ಲೂ ಒಂದುಗೂಡಿ ವ್ಯಕ್ತವಾಗುತ್ತದೆ. ಅಂಥ ಜೀವನಪ್ರೀತಿ ಅನು ಪಾವಂಜೆ ಅವರ ಈ ಕಲಾಕೃತಿಯಲ್ಲಿ ನಳನಳಿಸುತ್ತಿದೆ.
(ಧನ್ಯವಾದ: `ಅಂತಃಪುರ’ ಫೇಸ್‍ಬುಕ್ ಬಳಗ)
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.