Uncategorizedಪುಸ್ತಕ ಸಮಯ

“ಅಗ್ನಿಪುತ್ರಿ” ಯ ಅಂತರಂಗದ ಅನಾವರಣ – ಡಾ. ಬಿ.ಎನ್. ಸುಮಿತ್ರಾಬಾಯಿ

‘ಕಸ್ತೂರಿ’ ಮಾಸಪತ್ರಿಕೆಯಲ್ಲಿ ಎರಡು ವರ್ಷಕಾಲ ಪ್ರಕಟವಾದ ಲೇಖನಗಳ ಸಂಕಲನ ಡಾ. ಶಾಂತಾ ನಾಗರಾಜ್ ಅವರ ’ಅಗ್ನಿಪುತ್ರಿ’. ವ್ಯಾಸಭಾರತದಲ್ಲಿ ಇರುವ ಎಷ್ಟೋ ಸ್ತ್ರೀಸಬಲತೆಯ ಅಂಶಗಳು ಕಾಲಗತಿಯಲ್ಲಿ ನಷ್ಟವಾಗಿ ಹೋಗಿದ್ದು ಮುಂದಿನ ಕಾಲಗಳಲ್ಲಿ ಬೆಳೆದು ಮುನ್ನೆಲೆಗೆ ಬಂದಿದ್ದ ಹಲವಾರು ಸ್ತ್ರೀಸಂಬಂಧಿತ ಪೂರ್ವಗ್ರಹಗಳು ಹೇಗೆ ಕುಮಾರವ್ಯಾಸನ ಕಲ್ಪನೆಯ ದ್ರೌಪದಿಯಲ್ಲಿ ಕೆಲಸಮಾಡಿವೆ ಎನ್ನುವುದನ್ನು ಸೂಕ್ಷ್ಮವಾಗಿ ಇಲ್ಲಿ ಲೇಖಕಿ ಗುರುತಿಸಿಕೊಡುತ್ತಾರೆ.

ಮಹಾಭಾರತ ಒಂದು ಸುಮೇರುವಿನಂಥ ಇತಿಹಾಸ ಗ್ರಂಥವೂ ಕಾವ್ಯವೂ ಆಗಿದೆ.ಅದು ನಿರೂಪಿಸಿರುವ ವಿಶಾಲವಾದ ಜನ ಸಮುದಾಯಗಳ ಬಹುಮುಖ ಬದುಕಿನ ಸಾಧ್ಯತೆಗಳನ್ನು ಒಟ್ಟಾಗಿ ಹಿಡಿದಿಡುವ ಸೂತ್ರವೇ ಧರ್ಮ.ಈ ಕೃತಿಯ ಬಹುಮುಖೀನ ಅರ್ಥಸಾಧ್ಯತೆಗಳು ಬೇರೆ ಬೇರೆ ಕಾಲಘಟ್ಟಗಳ ಚಿಂತಕರನ್ನು, ತತ್ವದರ್ಶಕರನ್ನು ಕವಿಗಳನ್ನು ಸೆಳೆದಿವೆ. ಒಂದು ವಿಸ್ತಾರವಾದ ನಾಗರಿಕತೆಯ ಏಳು ಬೀಳುಗಳ ಸಂಕಥನವಾದ ಮಹಾಭಾರತದ ಅದ್ಭುತ ಪಾತ್ರಗಳಾದ ಕೃಷ್ಣ, ಭೀಮ, ಅರ್ಜುನ, ಕುಂತಿ, ಗಾಂಧಾರಿ, ಭೀಷ್ಮ ಮತ್ತು ಅವರೆಲ್ಲರನ್ನೂ ಮೀರಿಸಿದಷ್ಟು ಜನಮಾನಸದಲ್ಲಿ ನೆಲೆಸಿ ಕಾಡುತ್ತಾ ಬರುತ್ತಿರುವ ಆದ್ಭುತ ವ್ಯಕ್ತಿತ್ವದ ದ್ರೌಪದಿಯನ್ನು ಕವಿ ಕೋವಿದರು ಮತ್ತೆ ಮತ್ತೆ ಚಿತ್ರಿಸುತ್ತಾ ಬಂದಿರುತ್ತಾರೆ.

ಕಳೆದ ಶತಮಾನದಲ್ಲಿ ಮಾನವಶಾಸ್ತ್ರ ಮತ್ತು ಸಮಾಜಶಾಸ್ತ್ರಗಳ ಮೂಲಕ ಮಹಾಭಾರತವನ್ನು ಒಂದು ಯುಗದ ಅವಸಾನದ ಹಂತದಲ್ಲಿ ವಿಶ್ಲೇಷಿಸಿರುವ ಇರಾವತಿ ಕರ್ವೆಯವರ ಉದ್ದಾಮ ಸಂಶೊಧನಾತ್ಮಕ ಗ್ರಂಥ “ಯುಗಾಂತ”. ಅದರಲ್ಲಿ ಮೊದಲ ಬಾರಿಗೆ ದ್ರೌಪದಿಯನ್ನು ಮಾನವಳೆಂದು ಗುರುತಿಸಿ ಅವಳ ಕಾಲದ ಸಾಮಾಜಿಕ ವಾಸ್ತವದ ಹಿನ್ನೆಲೆಯಲ್ಲಿ ಅವಳ ಬದುಕು ಮತ್ತು ಕಾರ್ಯಗಳನ್ನು ಕರ್ವೆಯವರು ವಿವೇಚಿಸಿದ್ದಾರೆ. ಕನ್ನಡಲ್ಲಿ ಮಹಾಕವಿ ಕುವೆಂಪು ಬರೆದ “ದ್ರೌಪದಿಯ ಶ್ರೀಮುಡಿ” ಎಂಬ ಶ್ರೇಷ್ಠ ದಾರ್ಶನಿಕ ವಿಮರ್ಶೆಯ ಲೇಖನ, ಕಾದಂಬರಿಕಾರ ಎಸ್.ಎಲ್.ಭೈರಪ್ಪನವರ “ಪರ್ವ”, ಕವಿ ಎಚ್.ಎಸ್.ವೆಂಕಟೇಶಮೂರ್ತಿಯವರು ರಚಿಸಿರುವ “ಉರಿಯ ಉಯ್ಯಲೆ” ಎನ್ನುವ ಏಕವ್ಯಕ್ತಿ ನಾಟಕ, ಈಚೆಗಿನ ಲೇಖಕಿ ಎಮ್.ಎಸ್. ವೇದ ಅವರ “ಜಯ”ಎನ್ನುವ ಕಾದಂಬರಿ ಇಂಥಾ ಕೃತಿಗಳೆಲ್ಲವೂ ಮಹಾಭಾರತದ ಹಾಗೂ ದ್ರೌಪದಿಯ ಪಾತ್ರದ ಮರುಚಿಂತನೆಗಳನ್ನು ಪ್ರೇರೇಪಿಸುತ್ತವೆ. ಇದೀಗ ಹೊರಬಂದಿರುವ ಡಾ.ಶಾಂತಾ ನಾಗರಾಜ್ ಅವರ “ಅಗ್ನಿಪುತ್ರಿ” ಕೂಡ ಇದೇಸಾಲಿಗೆ ಸೇರುವಂತಹುದು.

“ಅಗ್ನಿಪುತ್ರಿ” ಹೊಚ್ಚಹೊಸ ಸಂಶೊಧನೆ ಎಂದು ಅನ್ನಲಾಗುವುದಿಲ್ಲ. ಲೇಖಕಿಯೇ ಹೇಳಿರುವಂತೆ “ವ್ಯಾಸಭಾರತ, ಪಂಪಭಾರತ ಮತ್ತು ಕುಮಾರವ್ಯಾಸಭಾರತ ಈ ಮೂರೂ ಪ್ರಮುಖ ಕಾಲಘಟ್ಟಗಳಲ್ಲಿ ರಚಿತವಾದವು. ಈ ಲೇಖನದ ‘ಯಾನ’ ವೂ ಇಂಥಾ ಕಾಲಘಟ್ಟಗಳಲ್ಲಿನ ಮಹಿಳೆಯರ ಸ್ಥಾನ, ಮಾನ, ನಡವಳಿಕೆ, ನಂಬಿಕೆ ಅವರು ಕಂಡ ಏಳುಬೀಳು, ಅನುಭವಿಸಿದ ಸುಖ ಮತ್ತು ನೋವು, ಇವುಗಳನ್ನು ಆಯಾಕವಿಗಳ ಮಾತಿನಲ್ಲೇ ಅರ್ಥಮಾಡಿಕೊಳ್ಳುವ ಒಂದು ಪ್ರಯತ್ನವಷ್ಟೇ.”(ಪು.19.)ಹೀಗೆ ನಮ್ರತೆಯಿಂದ ಶಾಂತಾ ಅವರು ಹೇಳಿದ್ದರೂ ಸಮಸ್ತ ಸ್ತ್ರೀಕುಲದ ಪ್ರತಿನಿಧಿಯ ರೀತಿಯಲ್ಲಿಯೇ ದ್ರೌಪದಿಯ ವ್ಯಕ್ತಿತ್ವವನ್ನು ಹೊಳೆಯಿಸುವ ಉದಾತ್ತ ಆಶಯವನ್ನು ಕೃತಿಯಲ್ಲಿ ಉದ್ದಕ್ಕೂ ಕಾಣಬಹುದು. ಇಲ್ಲಿಯ ಇನ್ನೊಂದು ಬಲವಾದ ಉದ್ದೇಶವು ಮನೋವಿಶ್ಲೇಷಣೆಯ ಮೂಲಕ ತಮ್ಮ ನಾಯಕಿಯ ಸ್ವಭಾವ, ಕ್ರಿಯಾವಳಿಗಳನ್ನು ವಿವೇಚಿಸಿರುವುದು.

ಕಳೆದ ಎರಡು ದಶಕಗಳಲ್ಲಿ ಕನ್ನಡದ ಸ್ತ್ರೀವಾದಿ ಚಿಂತನೆ ಮತ್ತು ವಿಮರ್ಶೆಗಳು ಸ್ವಂತದ ಸಾಂಸ್ಕೃತಿಕ ಬೇರುಗಳನ್ನು ಶೋಧಿಸಿ ಅಂಥಾ ಮಣ್ಣಿನ ವಾಸನೆಯಲ್ಲಿ ಮಹಿಳೆಯ ಸಶಕ್ತನೆಲೆಯೊಂದನ್ನು ಗುರುತಿಸುವಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತವೆ. ಶಾಂತಾ ಇಂತಹ ತಾತ್ವಿಕತೆಯ ನಿಲುವನ್ನು ಘೋಷಿಸಿಕೊಳ್ಳದೆಯೂ ಇಂತಹುದೇ ಯತ್ನವನ್ನು ಮಾಡಿರುವುದನ್ನು ಗಮನಿಸಬಹುದು. ವ್ಯಾಸ, ಪಂಪ,ಕುಮಾರವ್ಯಾಸರು ಚಿತ್ರಿಸಿರುವ ದ್ರೌಪದಿಯ ಬದುಕನ್ನು, ಅವಳ ವ್ಯಕ್ತಿವಿಶಿಷ್ಟತೆಯನ್ನು ಕಟ್ಟಿಕೊಡಲು ಅವರವರ ನುಡಿಗಳನ್ನೇ ಬಳಸಿಕೊಳ್ಳುತ್ತಾರೆ. ಆದರೆ ಆಯಾ ನುಡಿಗಳ ಒಳಹೊಕ್ಕು ತಮ್ಮ ಮಾನಸಿಕ ವಿವೇಚನೆ ಮತ್ತು ಜೀವನಾನುಭವದಿಂದ ಒದಗುವ ವಿವೇಕಗಳ ಮೂಲಕ ಅನನ್ಯವೂ ಅಸಾಮಾನ್ಯವೂ ಆದ ಸ್ತ್ರೀವ್ಯಕ್ತಿತ್ವದ ಮಾದರಿಯೊಂದನ್ನು ಲೇಖಿಸಿಬಿಡುತ್ತಾರೆ!. ವಿಶೇಷವಾಗಿ ವ್ಯಾಸರ ದ್ರೌಪದಿಯಲ್ಲಿ ಕಾಣುವ ಧೀರತೆ, ಗಾಂಭೀರ್ಯ, ಸ್ವಾಭಿಮಾನ,ಅನ್ಯಾಯವನ್ನು ಪ್ರತಿಭಟಿಸುವ ದಿಟ್ಟತನ, ಪಾಂಡಿತ್ಯ, ಸಂಯಮ ಸಮಯಾಸಮಯ ವಿವೇಕಗಳೊಂದಿಗೆ ಕುಮಾರವ್ಯಾಸನ ದ್ರೌಪದಿಯಲ್ಲಿ ಕಾಣುವ ಅಂತಃಕರಣ, ಭಾವಾವೇಶ,ಅದರಲ್ಲೂ ಅವಳ ಕ್ರೋಧದ ತೀವ್ರತೆ,ಮಾತ್ರವಲ್ಲದೆ ಅವಳ ಅಸಹಾಯಕತೆ ಅಳುಬುರುಕತನಗಳನ್ನೂ ಹೇಳದೆ ಬಿಡುವುದಿಲ್ಲ.ಹಾಗೆಯೇ ಸೇಡಿನ, ಪ್ರತೀಕಾರದ ಛಲಗಳನ್ನು ಸವಿವರವಾಗಿಯೇ ನಿರೂಪಿಸಿದ್ದಾರೆ.ಒಟ್ಟಾರೆ ಹೇಳುವುದಾದರೆ ದ್ರೌಪದಿಯ ವೈವಿಧ್ಯಮಯ ವ್ಯಕ್ತಿತ್ವ, ಸ್ವಭಾವಗಳೆಲ್ಲವನ್ನೂ ಸಾವಧಾನವಾಗಿ ಎತ್ತಿಕೊಂಡು ಜೋಡಿಸಿ ಅಂದವಾದ ಮಲ್ಲಿಗೆ ಮೊಗ್ಗುಗಳು ಎಂಬಷ್ಟು ತುಂಬು ತಾದಾತ್ಮ್ಯದಿಂದ ಮಾಲೆ ಕಟ್ಟಿ ಅರಳಿಸಿದ್ದಾರೆ. ಇದೇ ಈ ಕೃತಿಯ ಅನನ್ಯತೆಯಾಗಿರುತ್ತದೆ.

ಪುರುಷರು ಅಧಿಕಾರ ಸರ್ವಾಧಿಕಾರಗಳಿಂದ ಅವಳನ್ನು ಬದುಕಿಡೀ ಕ್ರೂರವಾಗಿ ನಡೆಸಿಕೊಂಡರೂ ಅದನ್ನು ಆಕೆ ವಿರೋಧಿಸಿಯೂ ಒಬ್ಬ ಪತ್ನಿಯಾಗಿ, ತಾಯಿಯಾಗಿ, ಮಹಾರಾಣಿಯಾಗಿ ತನ್ನ ಕೌಟುಂಬಿಕ ಮತ್ತು ಸಾಮಾಜಿಕ ಕರ್ತವ್ಯಕ್ಕೆ ಎಳ್ಳಷ್ಟೂ ಲೋಪ ಬರದಂತೆ ನಿರ್ವಹಿಸಿದ ಅಪ್ಪಟ ಕುಟುಂಬಿನಿಯಾಗಿ ಧರ್ಮಕ್ಕೆ ವಿರುದ್ಧವಾಗದ ಪ್ರತಿಭಟನೆಯನ್ನು ಮೆರೆಯುವ ಹೆಣ್ಣಾಗಿ ಶಾಂತಾ ಅವರ ‘ಅಗ್ನಿಪುತ್ರಿ’ ಹೊಮ್ಮಿ ಬೆಳಗುತ್ತಾಳೆ. ವ್ಯಾಸ ಮತ್ತು ಕುಮಾರವ್ಯಾಸ ಇಬ್ಬರ ಕಾಣ್ಕೆಗಳನ್ನೂ ಮನಃಶಾಸ್ತ್ರದ ಸೂತ್ರದ ಮೂಲಕ ಬೆಸೆದು ಇವರು ಕಟ್ಟಿ ಕೊಡುವ ಚಿತ್ರವು ನಿಜಕ್ಕೂ ಹೊಸಬಳಾದ ಪರಿಪೂರ್ಣ ಮಾನವಿ ಕೃಷ್ಣೆಯೇ ಸರಿ.

ಈ ಪುಸ್ತಕವು ‘ಕಸ್ತೂರಿ’ ಮಾಸಪತ್ರಿಕೆಯಲ್ಲಿ ಎರಡು ವರ್ಷಕಾಲ ಪ್ರಕಟವಾದ ಲೇಖನಗಳ ಸಂಕಲನ. ವ್ಯಾಸ ಭಾರತದಲ್ಲಿ ಇರುವ ಎಷ್ಟೋ ಸ್ತ್ರೀಸಬಲತೆಯ ಅಂಶಗಳು ಕಾಲಗತಿಯಲ್ಲಿ ನಷ್ಟವಾಗಿ ಹೋಗಿದ್ದು ಮುಂದಿನ ಕಾಲಗಳಲ್ಲಿ ಬೆಳೆದು ಮುನ್ನೆಲೆಗೆ ಬಂದಿದ್ದ ಹಲವಾರು ಸ್ತ್ರೀಸಂಬಂಧಿತ ಪೂರ್ವಗ್ರಹಗಳು ಹೇಗೆ ಕುಮಾರವ್ಯಾಸನ ಕಲ್ಪನೆಯ ದ್ರೌಪದಿಯಲ್ಲಿ ಕೆಲಸಮಾಡಿವೆ ಎನ್ನುವುದನ್ನು ಸೂಕ್ಷ್ಮವಾಗಿ ಅಲ್ಲಲ್ಲಿ ಲೇಖಕಿ ಗುರುತಿಸಿಕೊಡುತ್ತಾ ಸಾಗುತ್ತಾರೆ. ಹೀಗೆ ಒಂದು ತೌಲನಿಕ ಅಧ್ಯಯನದ ಆಯಾಮ ಇವರ ಕೃತಿಗೆ ಒದಗಿದೆ.

ಶಾಂತಾ ಅವರು ಕಾಲೇಜೊಂದರಲ್ಲಿ ಕನ್ನಡ ಉಪನ್ಯಾಸಕಿಯಾಗಿ ಪಂಪ, ಕುಮಾರವ್ಯಾಸರನ್ನು ಬೋಧಿಸಿದ ಅನುಭವವಿರುವ ಲೇಖಕಿ. ಹಾಗೆಯೇ ಕೌಟುಂಬಿಕ ಸಮಸ್ಯೆಗಳಿಂದ ಬಳಲುತ್ತಿರುವ ಗಂಡು ಹೆಣ್ಣುಗಳಿಗೆ ಹಾಗೂ ಕುಟುಂಬಗಳಿಗೆ ಆಪ್ತ ಮಾನಸಿಕ ಸಲಹೆ ನೀಡುವ ಕಾರ್ಯಕ್ಕೆ ಪ್ರೀತಿಯಿಂದ ತೊಡಗಿರುವವರು.ಪ್ರಸ್ತುತ “ಅಗ್ನಿಪುತ್ರಿ”ಯಲ್ಲಿ ಅವರ ಬೆನ್ನೆಲುಬಾಗಿ ಈ ಎರಡೂ ಅನುಭವಗಳು ನೆರವಾಗಿರುತ್ತವೆ. ಕಾವ್ಯ ಭಾಗಗಳನ್ನು ಪದರ ಪದರವಾಗಿ ಬಿಡಿಸುತ್ತಾ ವಿವರಿಸುವಲ್ಲಿ ಅವರಲ್ಲಿರುವ ಶಿಕ್ಷಕಿ ಮುನ್ನೆಲೆಗೆ ಬಂದರೆ, ದ್ರೌಪದಿಯನ್ನು ಪಾಂಡವರ ಕುಟುಂಬದ ತೊಲೆಗಂಬವಾಗಿಸಿ ಗಟ್ಟಿ ಹೆಣ್ಣನ್ನಾಗಿ ಕಾಣಿಸುವ ಕಳಕಳಿಯಲ್ಲಿ ಅವರ ಮನೋವಿಶ್ಲೇಷಕ ತಿಳುವಳಿಕೆ ಕೆಲಸ ಮಾಡಿರುತ್ತದೆ. ಒಟ್ಟಾರೆ ಎಲ್ಲರೂ ಓದಲು ಬಯಸಬಹುದಾದ ಲಲಿತವಾದ ಶೈಲಿಯಲ್ಲಿ ಇರುವ ಒಪ್ಪವಾದ ಕೃತಿಯೊಂದನ್ನು ಓದುಗರಿಗೆ ನೀಡಿರುವ ಶಾಂತಾ ನಾಗರಾಜ್ ಅವರಿಗೆ ಅಭಿನಂದನೆಗಳು. ಹಾಗೆಯೇ ಈ ಪುಸ್ತಕವನ್ನು ಪ್ರಕಟಿಸಿರುವ ಬೆಂಗಳೂರಿನ ನ್ಯೂ ವೇವ್ ಬುಕ್ಸ್ ಪ್ರಕಾಶನ ಸಂಸ್ಥೆಯವರಿಗೂ ಅಭಿನಂದನೆಗಳು.

ಡಾ. ಬಿ.ಎನ್. ಸುಮಿತ್ರಾಬಾಯಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

4 thoughts on ““ಅಗ್ನಿಪುತ್ರಿ” ಯ ಅಂತರಂಗದ ಅನಾವರಣ – ಡಾ. ಬಿ.ಎನ್. ಸುಮಿತ್ರಾಬಾಯಿ

 • H. G. Jayalakshmi

  ಶ್ರೀಮತಿ ಸುಮಿತ್ರಾಬಾಯಿಯವರು ಶ್ರೀಮತಿ ಶಾಂತಾ ನಾಗರಾಜ್ ಅವರ ” ಅಗ್ನಿಪುತ್ರಿ ” ಕೃತಿಯ ಬಗ್ಗೆ ಬರೆದಿರುವ ಪರಿಚಯಾತ್ಮಕ ಲೇಖನ, ಪುಸ್ತಕವನ್ನು ತಕ್ಷಣ ತರಿಸಿಕೊಂಡು ಓದಬೇಕು ಎನ್ನುವ ಕುತೂಹಲವನ್ನು ಸೃಷ್ಟಿಸಿದೆ.

  Reply
 • Dr.H. G. Jayalakshmi

  ಶ್ರೀಮತಿ ಸುಮಿತ್ರಾಬಾಯಿಯವರು ಶ್ರೀಮತಿ ಶಾಂತಾ ನಾಗರಾಜ್ ಅವರ ” ಅಗ್ನಿಪುತ್ರಿ ” ಕೃತಿಯ ಬಗ್ಗೆ ಬರೆದಿರುವ ಪರಿಚಯಾತ್ಮಕ ಲೇಖನ, ಪುಸ್ತಕವನ್ನು ತಕ್ಷಣ ತರಿಸಿಕೊಂಡು ಓದಬೇಕು ಎನ್ನುವ ಕುತೂಹಲವನ್ನು ಸೃಷ್ಟಿಸಿದೆ.

  Reply
 • ವಸುಂಧರಾ ಕದಲೂರು

  ಉತ್ತಮವಾಗಿ ಕೃತಿ ಹಾಗೂ ಕೃತಿಕಾರರನ್ನು ಪರಿಚಯಿಸಿದ್ದೀರಿ.

  Reply
 • Jayagowri

  ಆಗ್ನಿಪುತ್ರಿ ಪುಸ್ತಕ ಎಲ್ಲಿ ಕೊಳ್ಳಬಹುದು

  Reply

Leave a Reply

Your email address will not be published. Required fields are marked *