ಅಗೋಚರ – ಜಯಶ್ರೀ ದೇಶಪಾಂಡೆ

ಎಲ್ಲೆಂದರಲ್ಲಿ ಬಿಟ್ಟು ಬರಲಾದೀತೇ
ಮನಸ್ಸನ್ನು? ಪ್ರಶ್ನೆ ಕಾಡಿ
ಇಲ್ಲ , ಇನ್ನಾರದಿದು ಈ ಮನಸು ನಂದಲ್ಲವೇನು?
ನಾ ತಡೆಯದಿದ್ದರಿನ್ನಾರು ತಡೆದಾರು ಅಂದುಕೊಳ್ಳುತ ಮನಸಿನ ಹಿಡಿಗಿರುವ ದಂಡವ ಹಿಡಿಯಹೊರಟ ಕೈಗಾಗಲೇ ತಿಳಿದ್ಹೋಯ್ತು,
ಮನಸು ತನಗಿಷ್ಟ ಬಂದಲ್ಲಿ
ಇಳಿದು ಹೋಯ್ತೆಂದು!

ಚಿತ್ತ ಹುತ್ತಗಟ್ಟಿತೆನ್ನುವ ನೆವ ತೆಗೆದು ಅದೆಲ್ಲೋ ಕಾಡ ಮೇಡು. ಕೋಟೆ ಕೊತ್ತಲ, ಘೋರೆನ್ನುವ ನದಿ, ಭೋರೆನ್ನುವ ಸಾಗರ, ಗುಯ್ಯೆನ್ನುವ ಅಡವಿ, ಮಿಣಮಿಣವೆನುವ ಬೆಂಕಿಹುಳ..

ಸರಿ ಇನ್ನೇನು? ಈ ಮನಸಿಗೊಂದು ಹುಚ್ಚು ಅಲ್ಲವೇನು?
ಎಲ್ಲಿಳಿಯಬೇಕು ಎಲ್ಲಿ ನಿಲ್ಲಬೇಕೆಂಬ ಪರಿಜ್ಞಾನ ಇದೆಯೇನು? ಹೇಳೀಕೇಳೀ ಮನಸುಖರಾಯನಂತೆ ಅದು..

ಇಳಿದರೆ ಜೋಕೆ ಅನುವ ಕಮರಿ, ದುಂಬಿ ಕೂತಿದೆ ನೋಡುಬಾ ನಮ್ಮ ಮಿಲನೋತ್ಸವವ ಅನುತ ನಾಚುವ ಹೂವ…ನಿಲ್ಲು ನಾ ತಿಂದುಳಿದ ಹಣ್ಣು ನಿನಗೇ ಅನುತ ಕೆಂಪು ಕೊಕ್ಕಿಟ್ಟು ಹಣ್ಣ ಮುತ್ತಿಟ್ಟ ಗಿಳಿಯ…

ಗುದ್ದಿ ಗುದ್ದಿ ಮೊಲೆ ಚೀಪುವ ಕರಿಗರು, ಅಟ್ಟಾಟ ಕೂಟಕ್ಕೆ ಕರೆದು ಕಾಲೋಡಿಸಿ ಚಂಗನೆಗೆದು ಕೊರಳತಬ್ಬಿದ ಹೊಂಗೂದಲ ಮರಿನಾಯಿ…

ಬಿದ್ದೇನೋ ಬೀಳೆನೋ ತಾಳು ಹಣ್ಣಾಗಿ ಹಳದಿಯಾದೇನು ಅವಸರ ಏಕೆನುತ ಬೀಸಿ ಗಾಳಿಸೂಸಿ ನಕ್ಕೆಲೆಯ ವೈಯಾರಜಾಲವನ,

ಕೊನೆಗೆ ನದಿದಂಡೆಯಲಿ ಜಟಾ ಜೂಟಕ್ಕೊಂದಿಷ್ಟು ಕಂಡವರು ತಂದ ನೀರು ಹನಿಸಿಕೊಂಡು ಬೂದಿಭಾರದ ತತ್ವಜ್ಞಾನಿ ಮುಕ್ಕಣ್ಣನ ಮೂರನೇ ಕಣ್ಣು ತೆರೆಯದಿರಲಪ್ಪ…

ಆದರೇನು ಎನ್ನ ಹರಣ ನಿನಗೆ ಶರಣ ಈ ಮೂರು ಸುತ್ತಿನ ಮುಗಿತ ಎಂದಿಗಾದೀತೆಂಬ ಹವಣದಲಿ ಸ್ತಬ್ಧವಾದ ಮನಸು…

ನೀವು ಕಂಡಿರಾ?
ಎಲ್ಲಿ ಇಳಿದು ತನ್ನನೇ,
ಅದರೊಡನೆ ನನ್ನನೂ ಮರೆತ
ಈ ಮನಸ?
ನೀವು ಕಂಡಿರಾ?

ಹ್ಯಾಂಗೆ ಹಿಡಿದೆಳೆದು ತರಲೇ ಈ ಮನಸ? ಮಾತು ಕೇಳದ ಮನಸ…
ಮಾತೇ ಕೇಳದ ಈ ಮನಸ?

 

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

6 thoughts on “ಅಗೋಚರ – ಜಯಶ್ರೀ ದೇಶಪಾಂಡೆ

 • July 24, 2018 at 5:36 pm
  Permalink

  Kavana chennagide

  Reply
  • August 15, 2018 at 5:00 pm
   Permalink

   ಧನ್ಯವಾದಗಳು

   Reply
 • July 26, 2018 at 4:14 pm
  Permalink

  ಧನ್ಯವಾದಗಳು.

  Reply
 • July 28, 2018 at 7:46 am
  Permalink

  ತುಂಬಾ ಚೆನ್ನಾಗಿದೆ.. ಅಭಿನಂದನೆಗಳು..

  Reply
 • April 25, 2020 at 12:51 pm
  Permalink

  whoah this weblog is fantastic i really like
  reading your articles. Stay up the good work! You understand,
  lots of individuals are searching round for this information, you could aid them greatly.

  Reply

Leave a Reply

Your email address will not be published. Required fields are marked *