ಅಗಲಿದ ಕವಯತ್ರಿಗೆ ಕಂಬನಿ
ನಾಗಶ್ರೀ ಶ್ರೀರಕ್ಷ ಅವರ ಎರಡು ಕವಿತೆಗಳು
ಸಾಯುವ ಇರುಳು ದೇವರಂತಹ ನಾವು
ಮುಖವಿಲ್ಲದ ಮಾತು, ದನಿಯಿಲ್ಲದ ಹಾಡು
ಎಂದಾದರೂ ಸಿಗುವ ಚೂರು ಪ್ರೀತಿ
ಒಳಗೆ ಪರಮಾತ್ಮನಂತೆ ಏನೋ ಸುಳಿದಂತೆ
ಕಡಲು ಕಾಣುವುದು ಒಡಲು ಹೆಜ್ಜೆ ಇಕ್ಕುವುದು
ಹೊಳೆಯದಿದ್ದರೂ ಹೊಳೆದಂತೆ
ನಡೆದಿರುವುದು ಕಂಡಂತೆ
ಕಳೆದ ಮಳೆಯ ಆಕಾಶ ಇಂದು ಧೋ ಸುರಿವುದು
ದೂರ ದೂರದ ಮೋಡದ ಮೇಲೆಹಾರಿ ನಡೆವುದು
ಬೆನ್ನುತಾಕಿಸಿ ತಂಪು ಕಳೆದ ಸಂಜೆಯ ಹೊತ್ತು
ಮರದ ಮರೆಯಲ್ಲಿ ಹಕ್ಕಿಗಳ ಜೋರು ಮಾತು
ಸಾಯುವ ಇರುಳು ದೇವರಂತಹ ನಾವು
ಹೊಳೆಯದಿದ್ದರೂ ಹೊಳೆಯುವವು
ನಡೆಯದಿರುವುದು ಕಾಣುವವು
ಸದ್ದಿಲ್ಲದೆ ಹಸಿರ ಪರ್ವತಗಳು ಹರಸುವವು
ಅನಿಸುವುದು ಹೀಗೆಲ್ಲಾ ಒಂದು ತುಂಬು ನಕ್ಷತ್ರದ ಇರುಳು
ಕಿಟಕಿಯಲ್ಲಿ ಬೆಳಕು ಮಾತಾಡುತ್ತಿದೆ
ದೇವರೇ,
ಇಷ್ಟು ಹೇಳದಿರಲು, ನಾನು ನಿನ್ನ ಹಾಗಲ್ಲ
ರಾತ್ರಿಯಾದರೂ ಇಲ್ಲಿ
ಕಿಟಕಿಯಲ್ಲಿ ಬೆಳಕು ಮಾತಾಡುತ್ತಿದೆ
ಈ ಹೊತ್ತಿಗೆ ಬರಬೇಕಿದ್ದ ನಿದ್ದೆಯೂ
ಬರುತ್ತಿಲ್ಲ
ದೇವರೇ, ಯಾರಿರುವರು ಇಲ್ಲಿ
ನೀನೊಬ್ಬನೇ ಇರುವೆ
ಬೇಕು ಬೇಕೆಂದಾಗ ಮಾತನಾಡಲು
ಹೊತ್ತು ಮೂಡುವ ತನಕ
ಇದ್ದು ಹೋಗಲು
ಅವನು ಇಲ್ಲಿಂದ ಹೋಗಿಯಾಗಿದೆ
ಹೋದವನಿಗೆ ಸೆಖೆಯಾಗುತ್ತಿದೆಯಂತೆ
ಏನೂ ಅನಿಸುತ್ತಿಲ್ಲವಂತೆ
ಪಾಪ ಒಳ್ಳೆಯವನು,
ಹೀಗೆ ಹೋಗುತ್ತಿರಲಿ ಅವನು
ಕೈಕಾಲು ಚಾಚಿ ನಿರಾಳವಾಗಿ
ಮಲಗಿರುವೆ, ನೀನು ತುಂಬಾ ಹತ್ತಿರ
ಇಲ್ಲೇ ತೊಡೆಯ ಮೇಲೆ ಕುಳಿತಂತಿರುವೆ
ಬೇಕು ಬೇಕೆಂದಾಗ ನಗುತಿರುವೆ
ಬೇಡವೆಂದರೂತಿರುತಿರುಗಿ ಬರುತಿರುವೆ
ಹೀಗೆ ಬರುತ್ತಿದ್ದಿದ್ದರೆ ಜೊತೆಗಿರುವುದೇ
ಬೇಡವಿತ್ತು
ದೇವರೇ
ಆಗಾಗಾ ಬೇಡುವ ಈ ಸುಖ
ಮತ್ತೆ ಮತ್ತೆ ಕೊಡದೇ ಇರಬೇಡ
ಇಷ್ಟೂ ಹೇಳದಿರಲು ನಾನು ನಿನ್ನ ಹಾಗಲ್ಲ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.
ನಮಸ್ಕಾರ ಗಳು. ಈ ಪತ್ರಿಕೆ ಚೆನ್ನಾಗಿದೆ. ಅಭಿನಂದನೆಗಳು.