ಕಣ್ಣು ಕಾಣದ ನೋಟ/ ಅಂಪತ್ತೆಯ ಶಿಷ್ಯ! – ಎಸ್. ಸುಶೀಲ ಚಿಂತಾಮಣಿ

ಅಂಪತ್ತೆ ಎಲ್ಲರಿಗೂ ಬೇಕಾಗಿದ್ದವರು. ಸಾಯುವ ಕಾಲಕ್ಕೆ ಒಂದೊಮ್ಮೆ ಯಾರಿಗೆಲ್ಲ ಅವರು ಬೇಕಾಗಿದ್ದರೋ ಅವರಿಗೆಲ್ಲ ಬೇಡವಾಗಿದ್ದವರೂ ಹೌದು. ಮೂವರು ಮಕ್ಕಳ ತಾಯಿ ಅಂಪತ್ತೆಯ ಗಂಡ ಆಕೆಯ ಪಾಲಿಗೆ ಇದ್ದೂ ಇಲ್ಲದವನಂತೆ ಹೆಂಡತಿಯನ್ನು ಕಾಡುತ್ತಲೇ ಬದುಕಿ ಕೊನೆಗೊಂದು ದಿನ ಸತ್ತದ್ದೂ ಆಯಿತು. ಬಡತನದಲ್ಲಿ ಬೇಯುತ್ತಲೇ ಮಕ್ಕಳನ್ನು ಸಾಕಿ ಬೆಳೆಸಿದ ಅಂಪತ್ತೆ ಯಾರಿಗೇ ಯಾವುದೇ ಸಹಾಯ ಬೇಕಾದರೂ ತಟ್ಟನೆ ನೆನಪು ಮಾಡಿಕೊಳ್ಳಬೇಕಾದವರಾಗಿ ಬದುಕು ಸಾಗಿಸಿದವರು. ಗಂಡ ಬದುಕಿರುವವರೆಗೆ ಮುತ್ತೈದೆ ಎಂದೋ, ಆಮೇಲೆ, ವಯಸ್ಸಾದವರು ಎಂದೋ ಯಾರಾದರೂ ಆಕೆಯ ಕಾಲಿಗೆ ನಮಸ್ಕಾರ ಮಾಡಿದರೆ ಆಕೆ ಮಾಡುತ್ತಿದ್ದ ಆಶೀರ್ವಾದ ಬೇರೆಯವರಿಗೆ ವಿಚಿತ್ರ ಎನ್ನಿಸುತ್ತಿತ್ತು. “ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಭಗವಂತ ನಿಮಗೆ ಕೊಡಲಮ್ಮಾ”, ಇದು ಅಂಪತ್ತೆಯ ಸ್ಟಾಂಡರ್ಡ್ ಆಶೀರ್ವಾದ ಆಗಿರುತ್ತಿತ್ತು.

ಅಂಪತ್ತೆಗೆ ಮದುವೆ ಆಗುವ ಕಾಲಕ್ಕೆ ಒಬ್ಬ ಕಪ್ಪು ಬಣ್ಣದ ಸಾಧಾರಣವಾಗಿದ್ದ ಸುಸಂಸ್ಕೃತ ಮೇಷ್ಟ್ರು, ಹಾಗೂ ಮತ್ತೊಬ್ಬ ಗುಣದಲ್ಲಿ ಹೇಳಿಕೊಳ್ಳುವಂತೆದ್ದೇನೂ ಇಲ್ಲದ ಆದರೆ ಸುಂದರಾಂಗನಾಗಿದ್ದ ಹುಡುಗ ಆಕೆಯನ್ನು ಮದುವೆಯಾಗಲು ಒಪ್ಪಿದ್ದರಂತೆ. ಗುಣಕ್ಕೆ ಸೋಲದೆ ರೂಪಕ್ಕೆ ಸೋತು ಸುಂದರಾಂಗ ಗಂಡನನ್ನು ಆಯ್ಕೆ ಮಾಡಿಕೊಂಳ್ಳುವ ನಿರ್ಧಾರ ತೆಗೆದುಕೊಂಡು ಜೀವನವೆಲ್ಲ ಸೋತದ್ದನ್ನು ಅಂಪತ್ತೆ ಮರೆಯಲು ಸಾಧ್ಯವೇ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಬೆಂದು ಬಾಡಿದ ಅಂಪತ್ತೆ ಇನ್ಯಾವ ಆಶೀರ್ವಾದವನ್ನು ತಾನೇ ಮಾಡಿಯಾರು?

ಅಂಪತ್ತೆಯ ತವರಿನವರ ಎಲ್ಲ ಹೆಚ್ಚು ಕಡಿಮೆಗಳಿಗೂ ತಿಂಗಳಾನುಗಟ್ಟಲೆ ದುಡಿಯುವವರು ಅಂಪತ್ತೆಯೇ.  ಮಕ್ಕಳ, ಅಳಿಯಂದಿರ, ಸೊಸೆಯರ, ಎಲ್ಲ ಕಷ್ಟ ಸುಖಗಳಿಗೂ ಬೆನ್ನೆಲುಬಾಗಿ ನಿಂತದ್ದೂ ಅಂಪತ್ತೆಯೇ. ಅರೋಗ್ಯದ ಕಡೆ ಗಮನವೇ ಕೊಡದೇ ದುಡಿಯುವುದರ ಕಡೆಯೇ ಗಮನ ಕೊಡುತ್ತಿದ್ದ ಆಕೆಯನ್ನು ನಿದಾನಿಸುವಂತೆ ಎಚ್ಚರಿಸುತ್ತಿದ್ದದ್ದು ಒಬ್ಬ ಮಾತ್ರ. ಕಟ್ಟಿಕೊಂಡ ಗಂಡ ಮನೆಯ ಕಡೆ ಜವಾಬ್ದಾರಿ ಹೊರದಿದ್ದಾಗ ಐದನೇ ಕ್ಲಾಸಿನವರೆಗೆ ಓದಿದ್ದ ಅಂಪತ್ತೆ ಸಣ್ಣ ಪುಟ್ಟ ಕೈಖರ್ಚಿಗೆ ಆಗಲಿ ಎಂದು ಮನೆ ಪಾಠ ಮಾಡುತ್ತಿದ್ದರು. ಸ್ಕೂಲಿಗೆ ಹಾಕುವ ಮುಂಚೆ ನರ್ಸರಿ ಇಲ್ಲದ ಆ ಕಾಲದಲ್ಲಿ ‘ಅ-ಆ’ ತಿದ್ದಿಸಿಕೊಳ್ಳಲು ಆ ಹುಡುಗ ಅಂಪತ್ತೆಯ ಮನೆಗೆ ಟ್ಯೂಷನ್‍ಗೆ ಬರುತ್ತಿದ್ದ. ಅಂಪತ್ತೆಗೆ ಒಳ್ಳೆಯ ಫೀಸನ್ನು ಅವನ ತಂದೆ ತಾಯಿ ಕೊಡುತ್ತಿದ್ದರು. ಅದೇ ಹುಡುಗ ದೊಡ್ಡ ಡಾಕ್ಟರಾಗಿದ್ದ. ಅವನು ಮಾತ್ರ ಅಂಪತ್ತೆಯನ್ನು ಹೆದರಿಸುತ್ತಿದ್ದ.

‘ಮೇಡಮ್ಮಾ, ಮಿಕ್ಸರನ್ನ ವರ್ಷ ಎಲ್ಲಾ ನಿಮಿಷಾನೂ ಬಿಡದೇ ತಿರುಗಿಸ್ತಾ ಇದ್ದರೆ ಏನಾಗುತ್ತೇ ಹೇಳೀ?’, ಆಗಲೂ ಅಂಪತ್ತೆ ನಕ್ಕು ಸುಮ್ಮನೇ ದುಡಿಯುತ್ತಲೇ ಇದ್ದರು. ಕೈಕಾಲುಗಳಲ್ಲಿ ನಿತ್ರಾಣ ಹೆಚ್ಚಾಗಿ ಆಮವಾತದ ಕಾಯಿಲೆ ಹೆಚ್ಚಾಗಿ ಕೂತ ಕಡೆಯೇ ಎಲ್ಲ ಆಗ ಬೇಕಾದ ಕಾಲ ಬಂತು. ಮದುವೆ ಆದ ಬಡ ಹೆಣ್ಣು ಮಕ್ಕಳು ಮಾಡುವಷ್ಟೂ ಮಾಡಿದರು. ಮೈ ಹುಣ್ಣುಗಳಾಗಿ, ಬೆರಳು ಒಳಹೋಗುವಷ್ಟು ಹುಣ್ಣು ಕೊಳೆತಾಗ ಅವರಿಗೂ ದಿಕ್ಕು ತೋಚದಂತಾಯಿತು. ಎಲ್ಲರೂ ಅಂಪತ್ತೆಗೆ ಅಯ್ಯೋ ಪಾಪ ಎಂದವರೇ. “ಗಾಣಗಿತ್ತಿ ಅಯ್ಯೋ ಅಂದರೆ ಮಗೂ ನೆತ್ತಿ ತಣ್ಣಗಾಗುತ್ಯೇ?”. ಅಂಪತ್ತೆಯಿಂದ ಸೇವೆ ಪಡೆದವರೆಲ್ಲ ಒಂದರ್ಥದಲ್ಲಿ ಗಾಣಗಿತ್ತಿಯರಾಗಿಯೇ ಉಳಿದರು. ಮಗುವಿನ ನೆತ್ತಿಗೆ ಎಣ್ಣೆ ಹಚ್ಚುವವರು ಯಾರೂ ಕಾಣಲಿಲ್ಲ.

ಎಲ್ಲೋ ಇದ್ದ ಅಂಪತ್ತೆಯ ಡಾಕ್ಟರ್ ಶಿಷ್ಯ ಹಠಾತ್ತಾಗಿ ಹಾಜರಾದ. ದೂರದ ಊರಿನಿಂದ ಬಂದು ಅಂಪತ್ತೆಯನ್ನು ಆಂಬುಲೆನ್ಸ್‌ನಲ್ಲಿ ತನ್ನೂರಿಗೆ ಕರೆದುಕೊಂಡು ಹೋದ. ತಾನೇ ಡಾಕ್ಟರೂ ನರ್ಸೂ ಆಗಿ ಆಕೆಗೆ ತಿಂಗಳಾನುಗಟ್ಟಲೆ ಶುಶ್ರೂಷೆ ಮಾಡಿದ. ಯಾರೂ ಇಲ್ಲದಾಗ ಆಕೆಗೆ ಮಾಡಬೇಕಾದದ್ದನ್ನೆಲ್ಲ ಅವನೇ ನೋಡಿಕೊಂಡ. ಕೊನೆಗೊಂದು ದಿನ ಅಂಪತ್ತೆ ಸತ್ತರು. ಸ್ಮಶಾನದಲ್ಲಿ ಅಂಪತ್ತೆಯಿಂದ ಸೇವೆ ಮಾಡಿಸಿಕೊಂಡವರೆಲ್ಲ ಇದ್ದರು. ಡಾಕ್ಟರ್ ಶಿಷ್ಯನೂ ಇದ್ದ. ಅವನ ಹತ್ತಿರ ಕೆಲವರು ಹೋಗಿ “ ಡಾಕ್ಟರೇ, ನೀವು ನಿಜವಾಗಿಯೂ ವೆರಿ ಗ್ರೇಟ್. ಯಾವುದೇ ರೀತಿಯಲ್ಲಿಯೂ ನಿಮಗೆ ಸಂಬಂಧವೇ ಇಲ್ಲದ ಆಕೆಯನ್ನು ಎಂತಾ ಸ್ಥಿತಿಯಲ್ಲಿ ತಿಂಗಳಾನುಗಟ್ಟಲೆ ನೋಡಿಕೊಂಡಿರಿ. ಯಾರೂ ಮಾಡಲಾಗದ್ದನ್ನು ನೀವು ಮಾಡಿದ್ದೀರಿ” ಎಂದು ಕೈ ಮುಗಿದರು. ಥಟ್ಟನೆ ಆ ಡಾಕ್ಟರ್ ಶಿಷ್ಯ ಹೇಳಿದ “ ಅಲ್ಲಾ ನಾನೇನು ದೊಡ್ಡ ಕೆಲಸ ಮಾಡಿದೆ. ಈ ಮೇಡಮ್ಮಾ ನನ್ನ ಮೊದಲ ಗುರು. ನನ್ನ ಮೊದಲ “ಅ, ಆ” ಪಾಠ ಆಗಿದ್ದೇ ಆಕೆಯ ಕೈಯಿಂದ. ಆಕೆಯ ಮನೆಯೇ ನನಗೆ ಮೊದಲ ಶಾಲೆ. ಅವರನ್ನು ನಾನು ನೋಡಿಕೊಳ್ಳಲೇ ಬೇಕು ತಾನೇ? ಅದರಲ್ಲಿ ಹೆಚ್ಚುಗಾರಿಕೆ ಏನಿದೆ. ನಾನು ಮಾಡಬೇಕಾಗಿಯೇ ಇಲ್ಲದ್ದನ್ನ ನಾನು ಮಾಡಿದರೆ ಆಗ ಹೆಚ್ಚುಗಾರಿಕೆಯ ಪ್ರಶ್ನೆ. ಸುಮ್ಮ ಸುಮ್ಮನೆ ಜನರನ್ನು ಹೊಗಳುವುದನ್ನ ನಿಲ್ಲಿಸಿ ಸರ್. ಮನುಷ್ಯರಾಗಿ ಮಾಡಬೇಕಾದದ್ದನ್ನ ಮೀರಿ ನಾನೇನಾದರೂ ಮಾಡಿದರೆ ಆವತ್ತು ನನ್ನನ್ನ ಹೊಗಳಿ. ನಾನೂ ಒಪ್ಪುತ್ತೇನೆ “ ಎಂದ.

ಆ ಶಿಷ್ಯನದು ಅದೆಂತಹ ಅದ್ಭುತ ಮಾತು! ಅದೆಂತಹ ಸೇವೆ. ಆ ಮಾತಿನ ಹಿಂದೆ, ಆ ಸೇವೆಯ ಹಿಂದೆ ನಮ್ಮ ಬರಿಯ ಕಣ್ಣಿಗೆ ಕಾಣದ ಆಳವಾದ ನೋಟ ಅದೆಷ್ಟಿದೆ. ಆ ನೋಟದಿಂದ ನಮ್ಮ ಜೀವನವನ್ನು ಹಿಂತಿರುಗಿ ನೋಡಿದರೆ ನಾವು ಯಾರಿಗೆ ತಾನೇ ಯಾವ ಸಹಾಯವನ್ನು ಮಾಡಿದ್ದೇವೆ ಎಂದು ಹೇಳಿಕೊಳ್ಳಲು ಸಾಧ್ಯ? ಅಂಪತ್ತೆ ತನ್ನ ಗಂಡನನ್ನು ಆಯ್ಕೆ ಮಾಡಿಕೊಳ್ಳುವುದರಲ್ಲಿ ಸರಿಯಾದ ನಿರ್ಧಾರ ತೆಗೆದುಕೊಂಡಿದ್ದರೋ ಇಲ್ಲವೋ ಅದು ಬೇರೆ ಮಾತು. ಆದರೆ ತನ್ನ ಶಿಷ್ಯನಿಗೆ ಯಾವ ಪಾಠ ಕಲಿಸಬೇಕೆನ್ನುವುದನ್ನು ಸರಿಯಾಗಿಯೇ ನಿರ್ಧರಿಸಿ ಕಲಿಸಿದ್ದರು ಎನ್ನುವುದರಲ್ಲಿ ಸಂಶಯವೇ ಇಲ್ಲ.

ಎಸ್. ಸುಶೀಲ ಚಿಂತಾಮಣಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *