ಅಂದು ಇಂದು – ಎಂ. ಆರ್. ಅನಸೂಯ
ಅಂದು
ಕೈ ಹಿಡಿದು ನಡೆಸೆಂದೆ
ನಡುದಾರಿಯಲಿ ಬಿಟ್ಟೋಡಿದ್ದೆ
ಇಂದು
ಪಯಣ ಮುಗಿದಿದೆ
ದಾರಿ ತೋರ ಬಂದಿರುವೆ
ಅಂದು
ಬಿರುಬಿಸಿಲಲ್ಲಿ ಬಳಲಿ ನಿಂತಿದ್ದೆ
ನೆರಳಿನಾಸರೆ ಕೊಡಲಿಲ್ಲ
ಇಂದು
ದಟ್ಟ ನೆರಳಿನಲಿರುವೆ
ಛತ್ರಿ ಹಿಡಿಯ ಬಂದಿರುವೆ
ಅಂದು
ಕತ್ತಲಿದೆ ದೀಪ ಹಚ್ಚೆಂದೆ
ಕೇಳಿಸಿಕೊಳ್ಳಲೇ ಇಲ್ಲ
ಇಂದು
ಹುಣ್ಣಿಮೆ ಬೆಳಕಲ್ಲಿರುವೆ
ಹಣತೆ ಹಚ್ಚ ಬಂದಿರುವೆ
ಅಂದು
ಬಾಯಾರಿ ಬೊಗಸೆ ನೀರು ಕೇಳಿದೆ
ಕೊಡಲಿಲ್ಲ
ಇಂದು
ನೀರಡಿಕೆಯೇ ಆಗುತ್ತಿಲ್ಲ
ಸಿಹಿ ಪಾನಕ ತಂದಿರುವೆ
ಅಂದು
ಆಗಸ ನೋಡುತ್ತಿತ್ತು ಅಂಗೈ
ಇಂದು
ಭೂಮಿಯತ್ತ ಬಾಗಿದೆ ಅಂಗೈ
ತಿರುಗಿಸಬಹುದು
ಹಿಂದಕ್ಕೆ ಗಡಿಯಾರದ ಮುಳ್ಳುಗಳನ್ನು.
ಕಾಲವನ್ನಲ್ಲ
ಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.