ಕಣ್ಣು ಕಾಣದ ನೋಟ/ ಬದಲಾಗ ಬೇಕು ನಾವು – ಸುಶೀಲಾ ಚಿಂತಾಮಣಿ

“ಗಂಡಸರು ಎಷ್ಟಾದರೂ ಇರುವುದು ಹಾಗೇ ಅಲ್ಲವಾ? ಅವರ ಇಷ್ಟದಂತೆ ಎಲ್ಲಾ ಸೇವೆ ಮಾಡಿಬಿಟ್ಟರೆ ರಗಳೆ ಇರುವುದಿಲ್ಲ ಅಲ್ಲವಾ?” ಈ ರೀತಿಯಲ್ಲೇ ಆಲೋಚಿಸಿ ಗಂಡಸರ ಅಡಿಯಾಳಾಗಿ ಇರುವುದೇ ಸಹಜ ಎಂಬ ಭಾವನೆಯನ್ನು ಹೆಂಗಸರು ಮೊದಲು ಬದಲಿಸಿಕೊಳ್ಳುವುದು ಯಾವಾಗ? ಗಂಡ ಹೆಂಡತಿ ಇಬ್ಬರೂ ಸರಿಸಮಾನರು ಎಂಬ ಸೂಕ್ಷ್ಮತೆಯನ್ನು ಮಕ್ಕಳಲ್ಲಿ ಬೆಳೆಸದಿದ್ದರೆ ಮುಂದೆ ಸಂಸಾರದಲ್ಲಿ ಸಮಾನತೆ ಕಾಣುವುದಿಲ್ಲ.

     ಅವಳನ್ನು ನೀವೂ ನೋಡಿರಬಹುದು. ಬಾಬ್‍ ಕಟ್ ಕೂದಲು. ಒಳ್ಳೆಯ ಹಿತವಾದ ಮಿತವಾದ ಮೇಕಪ್. ತೆಳುವಾದ ಲಿಪ್‍ಸ್ಟಿಕ್. ಕಣ್ಣಿಗೆ ಗಾಗಲ್ಸ್. ತೋಳಿಲ್ಲದ ರವಿಕೆ. ಅಂದವಾದ ಸೀರೆ. ಕೆಲವೊಮ್ಮೆ ಜೀನ್ಸು ಮತ್ತು ಸ್ಕರ್ಟೂ ಸಹ. ಒಳ್ಳೆಯ ಓದು, ಒಳ್ಳೆಯ ಕೆಲಸ. ಒಳ್ಳೆಯ ಸಂಬಳ. ಆಧುನಿಕ ಮಹಿಳೆಯ ಮೇಲ್ದರ್ಜೆಯ ಜೀವನ. ಅವಳ ಮನೆಗೆ ಹೋಗಿ ನೀವು ನೋಡ ಬೇಕು. ಪ್ರತಿಬಿಂಬ ಕಾಣುತ್ತದೆ. ಅವಳ ಗಂಡನಿಗೆ ಬೇರೆಯವರು ಅಡಿಗೆ ಮಾಡಿದರೆ ಸರಿಹೋಗುವುದಿಲ್ಲ ಎಂದು ಅವಳೇ ಮಾಡುತ್ತಾಳೆ. ರುಚಿಯಾಗಿಲ್ಲ ಎಂದು ಯಾರೂ ಹೇಳಲಾಗದ್ದನ್ನೂ ಅವಳ ಗಂಡ ‘ದರಿದ್ರವಾಗಿದೆ’ ಎಂದು ಹೇಳಿಯೇ ತಿನ್ನುವುದು.

ಮೊದಲು ಬೇಡ ಎಂದ ಗಂಡನಿಗೆ “ಸ್ವಲ್ಪ ತಿನ್ನಿ. ಇನ್ನು ಸ್ವಲ್ಪ ತಿನ್ನೀಪ್ಪಾ” ಎಂದು ಬಲವಂತ ಮಾಡಿ ಅವಳು ಬಡಿಸುತ್ತಿದ್ದರೆ ಆತ ಅವಳಿಗೆ ಉಳಿದಿದೆಯೋ ಇಲ್ಲವೋ ಎನ್ನುವುದನ್ನೂ ನೋಡದೆ , ತಾನೇ `ದರಿದ್ರ’ ಎಂದಿದ್ದೆ ಎನ್ನುವುದನ್ನೂ ನೆನಪಿಸಿಕೊಳ್ಳದೆ ಎಲ್ಲವನ್ನೂ ತಿಂದು ಮುಗಿಸುವ ವ್ಯಕ್ತಿತ್ವ. ತಿಂದ ತಟ್ಟೆ ಡೈನಿಂಗ್ ಟೇಬಲ್ಲಿನ ಮೇಲೇ. ಕಾಫಿ ಲೋಟವನ್ನು  ಕೂಡ ಅವಳು ಅವನ ಕೈಗೇ ತಲುಪಿಸುವುದು. ಎದುರಿಗೆ ಕಾಫಿಯೊಂದಿಗೆ ನಿಂತ ಅವಳ ಕೈಯಿಂದ ಅವನು ಯಾವಾಗಲಾದರೂ ತನ್ನ ಕೈಗೆ ಕಾಫಿ ಲೋಟ ತೆಗೆದುಕೊಳ್ಳಬಹುದು. ಅಲ್ಲಿಯವರೆಗೆ ಅವಳು ನಿಂತೇ ಇರಬೇಕು.

ಕಾಫಿ ಕುಡಿದ ಮೇಲೆ ಆತ ಡೈನಿಂಗ್ ಟೇಬಲ್ಲಿನ ಮೇಲೆ ಲೋಟ ಇಡುವುದಿಲ್ಲ. ಅವಳು ತೆಗೆದು ಕೊಂಡು ಅದನ್ನು ಟೇಬಲ್ಲಿನ ಮೇಲೆ ಇಡಬೇಕು ಅಥವಾ ಹಿತ್ತಲಿಗೆ ಹಾಕ ಬೇಕು. ಇಬ್ಬರೂ ಕಾಫಿ ಕುಡಿಯುತ್ತಿರುವಾಗ , ಆತ ಬೇಗ ಕಾಫಿ ಕುಡಿದು ಮುಗಿಸಿದರೆ , ಅವಳು ತನ್ನ ಕಾಫಿಲೋಟವನ್ನು ಎ

ಡಗೈಗೆ ಬದಲಿಸಿ, ತನ್ನ ಬಲಗೈಯಿಂದ ಅವಳ ಗಂಡನ ಕಾಫಿ ಲೋಟವನ್ನು ತೆಗೆದುಕೊಂಡು ಟೇಬಲ್ಲಿನ ಮೇಲಿಟ್ಟು, ಆ ಮೇಲೆ ತಾನು ಕಾಫಿ ಕುಡಿದು ಮುಗಿಸಿ, ಎರಡೂ ಲೋಟಗಳನ್ನು ಒಟ್ಟಾಗಿ ಹಿತ್ತಲಿಗೆ ಹಾಕಿದ್ದು ನೋಡಿದವರು ಎಷ್ಟೋ ಜನ ಇದ್ದಾರೆ.

ಹೀಗೆಲ್ಲಾ ಏಕೆ ಎಂದು ಅವಳನ್ನು ಕೇಳಿದರೆ “ಬಿಡು ಅವರು ಗಂಡಸರಲ್ವಾ. ಅವರಿಗೆ ನಾವು ಹೀಗೆಲ್ಲಾ ಮಾಡಬೇಕು ಅಂತ ಇರುತ್ತೆ. ಆ ನಿರೀಕ್ಷೆಗಳನ್ನೆಲ್ಲಾ ಈಡೇರಿಸಿದರೆ ಮುಗೀತು . ರಾಮಾಯಣ ಇರಲ್ವಲ್ಲಾ” ಎನ್ನುವ ಅವಳ ಉತ್ತರ “ಗಂಡಸರು ಎಂದರೆ ಏನು?” ಎನ್ನುವ ಪ್ರಶ್ನೆಯನ್ನು ಕೇಳುವವರಲ್ಲಿ ಹುಟ್ಟುಹಾಕುವುದರಲ್ಲಿ ಅನುಮಾನವಿಲ್ಲ. ತನ್ನ ಕಾಲಿನ ಮುಂದೆ ಕೆಳಗೆ ಬಿದ್ದಿರುವ ದಿನ ಪತ್ರಿಕೆಯನ್ನು ಕೂಡ ಪ್ರತಿ ದಿನ ಅವನ ಕೈಗೆ ಮುಟ್ಟಿಸುವವಳು ಅವಳೇ. ಅವಳಿರುವವರೆಗೂ ಅವನು ಮೈ ಬಗ್ಗಿಸಬೇಕಿಲ್ಲ. ಕಾಫಿಯ ಲೋಟವನ್ನೇ ಗಂಡನ ಕೈಯಿಂದ ಪಡೆದು ಟೇಬಲ್ಲಿನ ಮೇಲೆ ಇಡುವ ಅವಳು ಗಂಡನಿಗೆ ಇನ್ನೂ ಏನೆಲ್ಲಾ ಸೇವೆ ಮಾಡಿರಬಹುದು ಎನ್ನುವುದನ್ನು ಯಾರಾದರೂ ಊಹಿಸಿಕೊಳ್ಳಬಹುದು.

ತೀರಾ ಇತ್ತೀಚೆಗೆ ಸುದ್ದಿ ಬಂತು. ಅವಳ ಗಂಡನಿಗೆ ಲಕ್ವಾ ಹೊಡೆದಿದೆಯಂತೆ ಆಸ್ಪತ್ರೆಯಲ್ಲಿ ಇದ್ದಾನಂತೆ ಅಂತ.
ನೋಡಲು ಹೋದಾಗ ಅವಳು ತನ್ನ ಗಂಡನಿಗೆ ತೋಳು ಕೊಟ್ಟು ನಡೆಸುತ್ತಿದ್ದಳು. ಊಟ ತಿನ್ನಿಸಿ ಬಾಯಿ ಒರೆಸುತ್ತಿದ್ದಳು. ಕಾಫಿಯನ್ನು ಚಮಚದಲ್ಲಿ ಕುಡಿಸುತ್ತಿದ್ದಳು. “ನರ್ಸು ಮಾಡುವುದಿಲ್ಲವೇ? ನೀನೇ ಯಾಕೆ ಎಲ್ಲಾ ಮಾಡ್ತೀ?” ಆಸ್ಪತ್ರೆಗೆ ಬಂದಿದ್ದ ಅವಳ ಸಂಬಂಧಿಕರಲ್ಲಿ ಯಾರೋ ಒಬ್ಬರು ಅವಳನ್ನು ಕೇಳಿದರು. ” ಗಂಡ ಹೆಂಡತಿ ಅನ್ನುವ ಸಂಬಂಧಕ್ಕೆ ಒಂದು ಅರ್ಥ ಇರಬೇಕಲ್ವಾ” ಎಂದಷ್ಟೇ ಹೇಳಿ ಅವಳು ಸುಮ್ಮನಾದಳು.

ಅವರ ಮುಂದೆ ನಕ್ಕು ಸುಮ್ಮನಾದ ಅವಳು , ಬಂದಿದ್ದವರು ಹೊರಗೆ ಹೋದ ಮೇಲೆ “ನಾನು ಹೀಗೆಲ್ಲಾ ಮಾಡುವುದು ನಿನ್ನ ಪ್ರಕಾರ ಸರಿ ಅಲ್ಲ ಅಲ್ಲವಾ?” ಅಂತ ನನ್ನ ಕೇಳಿದಳು. ಆಸ್ಪತ್ರೆಯಲ್ಲಿ ಅವಳು ಗಂಡನಿಗೆ ಮಾಡುತ್ತಿದ್ದ ಸೇವೆಯ ಬಗ್ಗೆ ನನಗೆ ಹೆಮ್ಮೆಯಿದೆ. ಅವಳ ತಾಳ್ಮೆಯ ಬಗ್ಗೆ ನನಗೆ ಗೌರವವಿದೆ. ಕಷ್ಟ ಸುಖದಲ್ಲಿ ದಂಪತಿಗಳು ಜೋಡಿ ಹೆಜ್ಜೆ ಹಾಕಬೇಕೆನ್ನುವ ಅವಳ
ತಿಳುವಳಿಕೆಯ ಬಗ್ಗೆ ಮೆಚ್ಚುಗೆಯಿದೆ. ಅದರ ಬಗ್ಗೆ ಯಾರೂ ಯಾವ ಆಕ್ಷೇಪಣೆಯನ್ನೂ ಮಾಡುವಂತೆಯೇ ಇಲ್ಲ. ಆದರೆ ಕೈಕಾಲು ಗಟ್ಟಿಮುಟ್ಟಾಗಿದ್ದಾಗ ಅವಳ ಗಂಡ ಅವಳನ್ನು ನಡೆಸಿಕೊಳ್ಳುತ್ತಿದ್ದ ರೀತಿಯ ಬಗ್ಗೆ ಅದಕ್ಕೆ ಅವಳು ತನ್ನನ್ನು ತಾನು ಒಪ್ಪಿಸಿಕೊಂಡಿದ್ದ ನಿಲುವಿನ ಬಗ್ಗೆ ನನ್ನ ತೀವ್ರ ಆಕ್ಷೇಪಣೆ ಇದ್ದೇ ಇದೆ.

“ಮನೆಯ ಹೊರಗೆ ಗಂಡಸಿಗೆ ಸರಿಸಮನಾಗಿ ಅಥವಾ ಅವನಿಗಿಂತ ಹೆಚ್ಚಾಗಿ ದುಡಿದು ಬಂದ ಹೆಂಡತಿ, ಹೆಣ್ಣಾಗಿರುವುದರಿಂದ “ಈ ಈ” ಕೆಲಸಗಳನ್ನು ಮಾಡಲೇ ಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಅವಳು ಹೊರಗೆ ಏನೇ ಆಗಿರಲಿ ಮನೆಯ ಒಳಗೆ ನನ್ನ ಗುಲಾಮಳು. ನನ್ನನ್ನು ತೃಪ್ತಿಪಡೆಸಲಿಕ್ಕಾಗಿಯೇ ಅವಳು ನನಗೆ ಹೆಂಡತಿಯಾಗಿರುವುದು.” ಎನ್ನುವ ನಿಲುವನ್ನು ಇನ್ನೂ ಉಳಿಸಿಕೊಂಡಿರುವ ಗಂಡಸರು ಇನ್ನೂ ಇದ್ದಾರೆ. ಮಹಿಳೆಯರ ದೃಷ್ಟಿಯಲ್ಲಿ ಇಂತಹ ಪುರುಷರು ಹಿಂದುಳಿದ ವರ್ಗಕ್ಕೆ ಸೇರಿದವರು ಎನ್ನುವುದು ಅವರಿಗೆ ಇನ್ನೂ ಅರ್ಥವಾಗದೇ ಇರುವುದು ಶೋಚನೀಯ.

ಆದರೆ ಇದಕ್ಕಿಂತ ಶೋಚನೀಯವಾದ ವಿಷಯವೆಂದರೆ ಮಹಿಳೆಯರು “ಹೆಣ್ಣು ಎಂದರೆ ಏನು?” ಎನ್ನುವುದನ್ನು ಸರಿಯಾಗಿ ಅರ್ಥಮಾಡಿಕೊಳ್ಳದೇ ಉಳಿದಿರುವುದು. ಪುರುಷನ ಇಷ್ಟಕ್ಕೆ ವಿರುದ್ಧವಾಗಿ ನಡೆದರೆ, ಪುರುಷನ ಅಪೇಕ್ಷೆಗಳನ್ನು ಈಡೇರಿಸದಿದ್ದರೆ ತಾನು ಹೆಣ್ಣೇ ಅಲ್ಲವಾಗಿಬಿಟ್ಟರೆ ಎನ್ನುವ ಹುಚ್ಚು ಭ್ರಮೆಯ ಹೆದರಿಕೆಯಲ್ಲಿ ತೊಳಲುತ್ತಿರುವುದು. ತನಗೆ ತಾನು ಕೊಟ್ಟು ಕೊಳ್ಳಬೇಕಾದ ಗೌರವವನ್ನು ತಾನೇ ತಳ್ಳಿ ಹಾಕುತ್ತಿರುವುದು. ತಮ್ಮ ಜೊತೆಗೆ ನಿಲ್ಲಬೇಕಾದವರನ್ನು ತಮ್ಮಿಂದ ಊಹಿಸಿಕೊಳ್ಳಲೂ ಸಾಧ್ಯವಿಲ್ಲದಷ್ಟು ಎತ್ತರದಲ್ಲಿ ಅನಾವಶ್ಯಕವಾಗಿ ಇಟ್ಟು, ಕಾರಣವಿಲ್ಲದೆಯೇ , ಅವಶ್ಯಕತೆಯೆ ಇಲ್ಲದೆಯೇ, ಅವರೇ ಮಾಡಿಕೊಳ್ಳಬೇಕಾದ, ಮಾಡಿಕೊಳ್ಳಬಹುದಾದ ಸಣ್ಣಪುಟ್ಟ ಕೆಲಸಗಳನ್ನೂ, ಅವರ ಸೇವಕರಂತೆ ತಾವೇ ಮಾಡುತ್ತಾ ಸವೆಯುವುದು.

ಒಂದೇ ಎರಡೇ? ಇಷ್ಟೇ ಅಲ್ಲ. ಕಣ್ಣಿಗೆ ಕಾಣದ ಹಲವಾರು ವಿಷಯಗಳು ಇನ್ನೂ ಬಹಳಷ್ಟು ಇವೆ. ಕಣ್ಣಿಗೆ ಕಾಣದ ಆ ನೋಟವನ್ನು ಸರಿಯಾಗಿ ಗುರುತಿಸಿ ಅರ್ಥ ಮಾಡಿಕೊಳ್ಳುವವರೆಗೆ ಮಹಿಳೆಯರ ಸ್ಥಿತಿ ಬದಲಾಗುವುದಾದರೂ ಹೇಗೆ? ಗಂಡ ಹೆಂಡತಿ ಇಬ್ಬರೂ ಸರಿಸಮಾನರು ಎಂಬ ಸೂಕ್ಷ್ಮತೆಯನ್ನು  ಮಕ್ಕಳಲ್ಲಿ ಬೆಳೆಸದಿದ್ದರೆ ಮುಂದೆ ಸಂಸಾರದಲ್ಲಿ ಸಮಾನತೆ ಕಾಣುವುದಿಲ್ಲ.

ಇದನ್ನು ಓದಿ: ನನ್ನೊಬ್ಬಳಿಂದೇನಾಗಬಹುದು? : ನೇಮಿಚಂದ್ರ 

– ಸುಶೀಲಾ ಚಿಂತಾಮಣಿ

 

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

One thought on “ಕಣ್ಣು ಕಾಣದ ನೋಟ/ ಬದಲಾಗ ಬೇಕು ನಾವು – ಸುಶೀಲಾ ಚಿಂತಾಮಣಿ

  • May 30, 2019 at 11:01 am
    Permalink

    ಇದಷ್ಟೇ ಅಲ್ಲ, ನೀವೇ ಹೇಳಿದಂತೆ ಇನ್ನೂ ಅನೇಕ ಹೇಳಲಾರದ, ಇತರರೊಂದಿಗೆ ಹಂಚಿಕೊಳ್ಳಲಾರದ ಕೆಲಸಗಳನ್ನು ಗಂಡನ ಬಲವಂತಕ್ಕೆ, ಅಥವಾ ಮಾಡದಿದ್ದರೆ ಅವನು ಸಿಟ್ಟಾಗಿ ಮನೆಯ ಸ್ವಾಸ್ಥ್ಯ ವನ್ನು ಕೆಡಿಸಿ ಹಾಕುತ್ತಾನೆಂಬ ಏಕೈಕ ಕಾರಣದಿಂದಾಗಿ ಮಾಡುವ ಅನೇಕ ಮಹಿಳೆಯರಿದ್ದಾರೆ. ನೀವು ಹೇಳಿದಂತೆ ಅಂಥ ಹೆಣ್ಣುಮಕ್ಕಳಿಗೆ ಒಳ್ಳೆಯ ಕೆಲಸ, ಸಂಬಳ , ಸಮಾಜದಲ್ಲಿ ಗೌರವ ಎಲ್ಲ ಇದೆ. ಆದರೆ ಮನೆಯಲ್ಲಿ ಮಾತ್ರ ಅವಳ ಪಾತ್ರ ಮತ್ತು ಸ್ಥಾನ ಏನೇನೂ ಬದಲಾಗಿಲ್ಲ.

    Reply

Leave a Reply

Your email address will not be published. Required fields are marked *