ಅಂಕಣ/ ಕಣ್ಣು ಕಾಣದ ನೋಟ/ ಗಂಡನಿಗೆ ಸರಿಯಾಗಿ ಚಚ್ಚಿದಳು – ಸುಶೀಲಾ ಚಿಂತಾಮಣಿ

ಪ್ರತೀದಿನ ಗಂಡನಿಂದ ವಿನಾಕಾರಣ ಹೊಡೆಸಿಕೊಳ್ಳುತ್ತಿದ್ದ ಶಶಿ, ಒಂದು ದಿನ ತಿರುಗಿಬಿದ್ದು ಗಂಡನನ್ನು ಚಚ್ಚಿದಳು. ಹಿಂಸೆಗೆ ಹಿಂಸೆಯೇ ಉತ್ತರವೇ ಎನ್ನುವುದು ಇಲ್ಲಿ ಬರುವ ಪ್ರಶ್ನೆ ಆಗಬಾರದು. ಗಂಡಸು ಹಿಂಸೆಯ ಮೂಲಕ ಪಡೆಯುವ ವಿಕೃತ ಉನ್ಮಾದಕ್ಕೆ, ಆ ನಂತರದ ಅವನ ನೆಮ್ಮದಿಗೆ ಹೆಣ್ಣು ಒಂದು ವಸ್ತುವಾಗಿ ಮಾತ್ರ ಎಷ್ಟುಕಾಲ ಉಳಿಯಬೇಕು ಎನ್ನುವುದು ಇಲ್ಲಿಯ ಪ್ರಶ್ನೆ.

ಶಶಿಯ ಬಗ್ಗೆ ನಿಮಗೆ ಗೊತ್ತಿಲ್ಲದೇ ಇರಬಹುದು. ಅವಳನ್ನು ಮಕ್ಕಳೆಲ್ಲ ಚಚ್ಚಕ್ಕಾ ಚಚ್ಚಕ್ಕಾ ಎಂದೇ ಕರೆಯುತ್ತಿದ್ದರು. ಮುದ್ದಾಗಿ ಬೆಳೆದ ಶಶಿ ಮಾತಾಡುವುದೂ ನಡೆದಾಡುವುದೂ ನಗುವುದೂ ಎಲ್ಲವೂ ಮೃದುವೇ. ಅವಳನ್ನು ನೋಡಿದರೆ ಯಾರಿಗಾದರೂ “ಅಧರಂ ಮಧುರಂ, ವದನಂ ಮಧುರಂ..” ಎನ್ನುವ ಸಾಲುಗಳು ನೆನಪಾಗಬಹುದು. ಹಾಗಿದ್ದಳು ಅವಳು. ತಾಳ್ಮೆ ಎನ್ನುವುದನ್ನೇನಾದರೂ ಅದರ ಉತ್ಕøಷ್ಟ ಸ್ಥಿತಿಯಲ್ಲಿ ನೋಡಬೇಕಾದರೆ ಶಶಿಯನ್ನು ನೋಡಿದರೆ ಸಾಕು. “ಮಹಾತಾಯಿ” ಅವಳು. ಅಂತಹ ಶಶಿ ತನ್ನ ಗಂಡನನ್ನು ಹಾಕಿ ಚಚ್ಚಿದಳು ಎನ್ನುವುದು ಬೀದಿಯೆಲ್ಲಾ ಸುದ್ದಿಯಾದಾಗ ಯಾರಿಗಾದರೂ ಆಶ್ಚರ್ಯವೇ. “ಶಶಿ ತನ್ನ ಗಂಡನನ್ನು ಚಚ್ಚಿ ಬಿಸಾಡಿದಳಂತೆ. ಕಾಲು ಕಾಲಲ್ಲೇ ಒದ್ದಳಂತೆ. ಮೇಲೆ ಏಳಲೂ ಬಿಡಲಿಲ್ಲವಂತೆ. ಮೂತಿ ಮುಸಡಿ ನೋಡದೇ ತದಕಿದಳಂತೆ. ಪಾಪ ಮಲಗಿದ್ದ ಗಂಡಸನ್ನು ಹೆಂಗಸೊಬ್ಬಳು ಅದೂ ತಾಳಿ ಕಟ್ಟಿಸಿಕೊಂಡ ಹೆಂಡತಿ ಚಚ್ಚುವುದು ಅಂದರೆ ಏನಿದರ ಅರ್ಥ?” ಹೀಗೇ ಹತ್ತಾರು ಮಾತು ಎಲ್ಲರಿಂದ ಬಂತು. ಹೆದರಿದ ಗಂಡ ತನ್ನ ಕಡೆಯವರನ್ನೆಲ್ಲ ಕರೆಯಿಸಿಕೊಂಡ. ಅವನ ಕಡೆಯವರೆಲ್ಲ ಸೇರಿ ಶಶಿಯನ್ನು ಒಪ್ಪಿಸಿ ತವರಿಗೆ ಕಳಿಸಿದರು. ತವರಿನವರು ತಾನೇ ಹೇಗೆ ಹದಿನೈದು ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟ ಮಗಳನ್ನು ಮತ್ತೆ ಮನೆಯಲ್ಲಿ ಇಟ್ಟುಕೊಂಡಾರು? ಅವರಿಗೂ ಚಿಂತೆ ಶುರುವಾಯಿತು. ಸರಿ ಅವರಿವರ ಮಧ್ಯಸ್ಥಿಕೆಯಲ್ಲಿ ಎರಡು ಕುಟುಂಬದವರೂ ಮಾತುಕತೆಗೆ ಕೂತರು. ಶಶಿಯ ಗಂಡನದು ಒಂದೇ ಮಾತು “ನನಗೆ ಶಶಿ ಎಂದರೆ ಹೆದರಿಕೆ. ಅವಳಿಂದ ನನಗೆ ಪ್ರಾಣ ಭಯವಿದೆ. ಅವಳ ಜೊತೆ ಬಾಳಲು ಸಾಧ್ಯವಿಲ್ಲ.” ನಿರೀಕ್ಷೆಯಂತೆ ಎಲ್ಲರೂ ಶಶಿಗೆ ಬುದ್ಧಿ ಹೇಳುವವರೇ ಆದರು.

ಶಶಿ ಕೇಳಿದ್ದೂ ಒಂದೇ ಮಾತು. “ಹೆದರಿಕೆ ಯಾಕೆ? ನನಗೂ ಹೊಡೆಯಲು ಬಡೆಯಲು ಬರುತ್ತೆ ಅಂತಾನೇ?”

ಮೆಲ್ಲಮೆಲ್ಲನೇ ಯಾರಲ್ಲೂ ಹೇಳಿರದ ತನ್ನ ಕಥೆಯನ್ನು ಅವಳು ಬಿಚ್ಚಿದಳು. ಮದುವೆ ಆದ ಮೂರನೇ ದಿನದಿಂದಲೇ ಅವಳಿಗೆ ಗಂಡನಿಂದ ಅವನ ಮನೆಯವರಿಂದ ಕಿರುಕುಳ. ನಿಂತರೆ ಕೂತರೆ ಶಶಿಯಲ್ಲಿ ತಪ್ಪು ಕಂಡುಹಿಡಿಯುವ ಅವಳ ಅತ್ತೆ ಮಾವ ನಾದಿನಿ. ದಿನನಿತ್ಯ ಅವಳ ಗಂಡನಿಗೆ ಹೇಳಿ ಅವನಿಂದ ಅವಳಿಗೆ ಹೊಡೆಸಿ ಒದೆಸಿ ಸಂತೋಷ ಪಡುತ್ತಿದ್ದರು. ಪ್ರತಿ ರಾತ್ರಿ ಕುಡಿದ ಅಮಲಿನಲ್ಲಿ ಬರುವ ಗಂಡ ಅವಳನ್ನು ಚಚ್ಚದೇ ಮಲಗುತ್ತಿರಲಿಲ್ಲ. ಕುಡಿತದ ಚಟವೊಂದೇ ಅಲ್ಲ ಹೆಂಡತಿಯನ್ನು ಹೊಡೆಯುವ ಚಟವೂ ಅವನಿಗೆ ಗಟ್ಟಿಯಾಗಿ ಅಂಟಿತ್ತು. ಕೆಟ್ಟ ಅವಾಚ್ಯ ಶಬ್ದಗಳ ಮಳೆ ನಿಲ್ಲುತ್ತಲೇ ಇರಲಿಲ್ಲ. ಹೊರಗಿನವರಿಗೆ ಯಾವುದೂ ಗೊತ್ತಾಗುತ್ತಿರಲಿಲ್ಲ. ಅವನ ಇನ್ನೊಂದು ಮುಖದ ಪರಿಚಯ ಬೇರೆಯವರಿಗೆ ಇರಲಿಲ್ಲ. ಅವರಿವರಿಗೆ ಅವನು ಸಂಭಾವಿತ. ಅವನ ಕಡೆಯವರಿಗೆ ಹೇಳಿದರೆ ಅವರೆಲ್ಲ ಹೇಳುತ್ತಿದ್ದದ್ದು ಒಂದೇ “ಅವನು ಗಂಡಸು. ನೀನು ತೆಪ್ಪಗಿರು.” ಶಶಿ ಹದಿನೈದು ವರ್ಷ ತೆಪ್ಪಗಿದ್ದಳು.

ಆದರೆ ಆದದ್ದೆಲ್ಲ ಇಷ್ಟೇ.

ಅದೊಂದು ದಿನ ಒಂದು ಇಲಿಯನ್ನು ಒಂದು ಬೆಕ್ಕು ಅಟ್ಟಿಸಿಕೊಂಡು ಬಂತು. ಸುಮಾರು ಹತ್ತು ನಿಮಿಷ ಅಟ್ಟಾಡಿಸಿರಬೇಕು. ಇನ್ನೇನು ಇಲಿಯನ್ನು ಬೆಕ್ಕು ತನ್ನ ಬಾಯಿಗೆ ಸಿಕ್ಕಿಸಿಕೊಳ್ಳುತ್ತದೆ ಎನ್ನುವಾಗ ಒಂದು ವಿಚಿತ್ರ ಘಟನೆಯಾಯಿತು. ಮುಂದೆ ಮುಂದೆ ಹೆದರಿ ಓಡುತ್ತಿದ್ದ ಇಲಿ ತಟ್ಟನೆ ಹಿಂದೆ ತಿರುಗಿ ಬೆಕ್ಕಿನ ಕಡೆ ನೋಡುತ್ತಾ ನಿಂತಲ್ಲೆ ನಿಂತಿತು. ಯಾಕೋ ಏನೋ ಬೆಕ್ಕೂ ತಟ್ಟನೆ ನಿಂತು ಬಿಟ್ಟಿತು.

ಇನ್ನೇನು ಬೆಕ್ಕು ಇಲಿಯನ್ನು ತಿಂದೇ ಬಿಡುತ್ತದೆ ಎಂದು ಶಶಿ ತಿಳಿದಿದ್ದಳು. ಆದರೆ ಹಾಗಾಗಲಿಲ್ಲ. ಬೆಕ್ಕು ಹೆದರಿ ಬಾಲ ಮುದುರಿ ಅಲ್ಲಿಂದ ಹೊರಗೆ ಓಡಿತು. ಶಶಿ ನೋಡಿದ್ದು ಅಷ್ಟೇ. ಆದರೆ ಕಲಿತದ್ದು ಬಹಳ. ಆ ರಾತ್ರಿ ಗಂಡ ಬಂದು ಅವಳನ್ನು ಬೈದು ಚಚ್ಚಿ ಮತ್ತಷ್ಟು ಕುಡಿದು ಗೊರಕೆ ಹೊಡೆಯುತ್ತಿದ್ದಾಗ ಹೊರಗೆ ಬಚ್ಚಲುಮನೆಯಲ್ಲಿ ಜೋಡಿಸಿದ್ದ ಸೌದೆಗಳಲ್ಲಿ ಗಟ್ಟಿಯಾದದ್ದನ್ನು ತಂದು ಗಂಡನನ್ನು ಚಚ್ಚಿದಳು. ಬಾಗಿಲಿಗೆ ಚಿಲಕ ಹಾಕಿದ್ದಳು. ಕುಡಿದು ಸೋತಿದ್ದ ಗಂಡ ಮೇಲೇಳಲಾಗಲಿಲ್ಲ. ಕಾಲು ಕಾಲು ಹಿಡಿದು ಬೇಡಿಕೊಂಡ. ಶಶಿ ಬಿಡಲಿಲ್ಲ. ಸಮಾಧಾನ ಆಗುವವರೆಗೂ ಚಚ್ಚಿ, “ಥು” ಎಂದು ಉಗಿದು ಹೊರಗೆ ಬಂದಳು. ಮನೆಯವರೆಲ್ಲ ಅವಳಿಗೆ ಕಮಕ್ ಕಿಮಕ್ ಎನ್ನದೇ ದಾರಿ ಬಿಟ್ಟರು. ಶಶಿ ಹೋಗಿ ನೆಮ್ಮದಿಯ ನಿದ್ದೆ ಮಾಡಿದಳು.

ಯಾವ ತಪ್ಪನ್ನೂ ಮಾಡದ ಶಶಿಗೆ ಅವಳ ಗಂಡ ನಿರಂತರವಾಗಿ ಹಿಂಸೆ ಮಾಡುವಾಗ ಸುತ್ತಲಿನವರಿಗೆ ಆಶ್ಚರ್ಯವಾಗಲಿಲ್ಲ. ಆದರೆ ಅದೇ ಶಶಿ ಒಂದೇ ಒಂದು ದಿನ ಕೆಲವು ನಿಮಿಷಗಳ ಕಾಲ ತನ್ನ ಗಂಡನಿಗೆ ಬಾರಿಸಿದಾಗ ಎಲ್ಲರಿಗೂ ಆಶ್ಚರ್ಯವೇ. “ಇಲಿಯೂ ಬೆಕ್ಕನ್ನು ಎದುರಿಸಲಿಕ್ಕೆ ಸಾಧ್ಯ” ಎನ್ನುವುದು ಎಷ್ಟು ಜನರಿಗೆ ಗೊತ್ತಾಗಬೇಕು?

ಶಶಿ ಮಾಡಿದ್ದು ಸರಿಯೇ ತಪ್ಪೇ ಎನ್ನುವುದು ಬೇರೆಯ ಮಾತು. ಹಿಂಸೆಗೆ ಹಿಂಸೆಯೇ ಉತ್ತರವೇ ಎನ್ನುವುದೂ ಇಲ್ಲಿ ಬರುವ ಪ್ರಶ್ನೆ ಆಗಬಾರದು. ಗಂಡಸು ಹಿಂಸೆಯ ಮೂಲಕ ಪಡೆಯುವ ವಿಕೃತ ಉನ್ಮಾದಕ್ಕೆ, ಆ ನಂತರದ ಅವನ ನೆಮ್ಮದಿಗೆ ಹೆಣ್ಣು ಒಂದು ವಸ್ತುವಾಗಿ ಮಾತ್ರ ಎಷ್ಟುಕಾಲ ಉಳಿಯಬೇಕು ಎನ್ನುವುದು ಇಲ್ಲಿಯ ಪ್ರಶ್ನೆ. ಗಂಡಸಿಗೆ ಗಂಡಾಗಿ ಹುಟ್ಟಿದ ಮಾತ್ರಕ್ಕೆ ಮತ್ತೊಂದು ಜೀವವನ್ನು ಹಿಂಸಿಸುವ ಅಧಿಕಾರ ಬರುತ್ತದೆ ಏನ್ನುವುದಾದರೆ ಅವನ ಆ ಹುಟ್ಟಿಗೆ ಬೆಲೆಯಾದರೂ ಉಳಿಯುವುದು ಎಲ್ಲಿಂದ? ಹೆಣ್ಣು ಸಹ ಮನುಷ್ಯಳು ಎನ್ನುವುದನ್ನು ಗುರುತಿಸಲಾಗದವರು ಮನುಷ್ಯರೇ ಅಲ್ಲ. ಅಂತಹವರು ಮನುಷ್ಯರಲ್ಲ ಎನ್ನುವುದು ಬರಿಯ ಕಣ್ಣಿಗೆ ಕಾಣುವುದಿಲ್ಲ. ಅದು ಕಣ್ಣಿಗೆ ಕಾಣದ ನೋಟ.

ಶಶಿ ಚಚ್ಚಿದ್ದು ಅವಳ ಗಂಡನನ್ನು ಎನ್ನುವುದು ಎಲ್ಲರ ಕಣ್ಣೂ ಕಂಡಿದ್ದು. ಆದರೆ ಅವಳು ಚಚ್ಚಿದ್ದು ಗಂಡನನ್ನಲ್ಲ. ಅನ್ಯಾಯದ ವಿರುದ್ಧ ತಿರುಗಿ ಬೀಳಲು ಅವಳಲ್ಲಿ ತಾಕತ್ತಿದ್ದರೂ ಹಾಗೆ ಮಾಡಲು ಅವಳಲ್ಲಿ ಇದ್ದ ಹಿಂಜರಿಕೆಯನ್ನು ಎನ್ನುವುದು ಬರಿಯ ಕಣ್ಣಿಗೆ ಕಾಣುವುದಲ್ಲ.

ಶಶಿಯ ಗಂಡ ಮುಂದೆಂದೂ ಅವಳನ್ನು ಹೊಡೆಯಲಿಲ್ಲ. ಅವಳು ಇನ್ನೂ ಹೆಚ್ಚು ಮೃದುವಾಗಿಯೇ ಇದ್ದಾಳೆ. ಅವರ ದಾಂಪತ್ಯ ಚೆನ್ನಾಗಿದೆ. ಇದಕ್ಕೆ ಕಾರಣ ಇಲಿಯೋ, ಸೌದೆಯೋ ಅಸ್ಮಿತೆಯ ಅರಿವೋ ಎನ್ನುವುದು ಅವರವರ ವಿವೇಚನೆಗೆ ಬಿಟ್ಟದ್ದು.

– ಎಸ್. ಸುಶೀಲ ಚಿಂತಾಮಣಿ

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *